ನೂತನ TVS Raider iGo: ಬೂಸ್ಟ್ ಮೋಡ್ ಹಾಗೂ ಐಗೋ ಅಸಿಸ್ಟ್ ತಂತ್ರಜ್ಞಾನ ದೊಂದಿಗೆ ರೋಡ್ ಮೇಲೆ ಮಿಂಚಲು ಸಜ್ಜು!
ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ (TVS Motor) ಕಂಪನಿಯ ಹೆಸರು ಬಹಳ ಹಿಂದಿನಿಂದಲೂ ಗುರುತಿಸಿಕೊಂಡಿದೆ. ತನ್ನ ವಿಶಿಷ್ಟ ವಿನ್ಯಾಸ ಮತ್ತು ಗುಣಮಟ್ಟದಿಂದ ಗ್ರಾಹಕರನ್ನು ಆಕರ್ಷಿಸುವ ಈ ಕಂಪನಿಯ ‘ರೈಡರ್ 125 (TVS Raider)’ ಬೈಕ್ ಕೂಡ ಅದೇ ರೀತಿಯ ಯಶಸ್ಸನ್ನು ಕಂಡಿದೆ. 2021ರ ಸೆಪ್ಟೆಂಬರ್ನಿಂದ ಇಲ್ಲಿಯವರೆಗೆ, ಈ ಬೈಕ್ 10 ಲಕ್ಷ ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯ ಮಾರಾಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.
ಐತಿಹಾಸಿಕ ಮಾರಾಟದ ಸಾಧನೆ ಮಾಡಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ‘ರೈಡರ್ 125’ ಮೋಟಾರ್ಸೈಕಲ್ಗೆ ಹೊಸ ಆಯಾಮವನ್ನು ನೀಡುವ ‘ರೈಡರ್ ಐಗೋ (TVS Raider iGo)’ ಎಂಬ ಹೊಸ ರೂಪಾಂತರವನ್ನು ಗುರುವಾರ ಬಿಡುಗಡೆ ಮಾಡಿದೆ. ಗ್ರಾಹಕರ ಬಜೆಟ್ಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾದ ಈ ಹೊಸ ರೂಪಾಂತರವು ರೂ. 98,389 ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ರೇಡರ್ 125 ಅನ್ನು ಡ್ರಮ್, ಸಿಂಗಲ್ ಸೀಟ್, ಸ್ಪ್ಲಿಟ್ ಸೀಟ್, iGo, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು SX ಎಂಬ ಆರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ವೇರಿಯೆಂಟ್ ಬಿಡುಗಡೆ

ಟಿವಿಎಸ್ ರೈಡರ್ ಐಗೋ ವೈಶಿಷ್ಟ್ಯಗಳು, ವಿನ್ಯಾಸ
TVS ರೇಡರ್ iGo ಈಗ ನಿಮಗೆ ಹೊಸ ಮತ್ತು ಆಕರ್ಷಕವಾದ ನರ್ಡೋ ಗ್ರೇ ಬಣ್ಣದ ಆಯ್ಕೆಯನ್ನು ನೀಡುತ್ತಿದೆ. ತಿಳಿ ಬೂದು ಬಣ್ಣಕ್ಕೆ ಕಪ್ಪು ಬಣ್ಣದ ಸಂಯೋಜನೆ ಮತ್ತು ಕೆಂಪು ಅಲಾಯ್ ವೀಲ್ಗಳು ಬೈಕ್ಗೆ ಒಂದು ವಿಶಿಷ್ಟವಾದ ನೋಟವನ್ನು ನೀಡುತ್ತವೆ. ಸ್ಪ್ಲಿಟ್ ಸೀಟ್ನೊಂದಿಗೆ ಬರುವ ಈ ಮಾದರಿಯಲ್ಲಿ TVS ಸ್ಮಾರ್ಟ್ಎಕ್ಸ್ಕನೆಕ್ಟ್ ತಂತ್ರಜ್ಞಾನದೊಂದಿಗೆ ಕೂಡಿದ LCD ಡ್ಯಾಶ್ಬೋರ್ಡ್ ಅನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವು ನಿಮಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮತ್ತು ಕಾಲ್ ನೋಟಿಫಿಕೇಶನ್ ಮತ್ತು ವಾಯ್ಸ್ ಅಸಿಸ್ಟೆನ್ಸ್ನಂತಹ 85 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
ಟಿವಿಎಸ್ ರೈಡರ್ ಐಗೋ (TVS Raider iGo) ಬೈಕಿನ ಸಸ್ಪೆನ್ಶನ್ ವ್ಯವಸ್ಥೆಯು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳು ಮತ್ತು ಹಿಂಭಾಗದಲ್ಲಿ ಐದು ವಿಭಿನ್ನ ರೀತಿಗಳಲ್ಲಿ ಸರಿಹೊಂದಿಸಬಹುದಾದ ಮೋನೋ ಶಾಕ್ ಅನ್ನು ಒಳಗೊಂಡಿದೆ. 240 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ಹಿಂಭಾಗದ ಡ್ರಮ್ ಬ್ರೇಕ್ಗಳು ನಿಮಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಬ್ರೇಕಿಂಗ್ ಅನ್ನು ನೀಡುತ್ತವೆ. 17 ಇಂಚಿನ ಅಲಾಯ್ ವೀಲ್ಗಳು ಮತ್ತು ಟ್ಯೂಬ್ಲೆಸ್ ಟೈರ್ಗಳು ಈ ಬೈಕ್ಗೆ ಸ್ಟೈಲಿಶ್ ನೋಟವನ್ನು ನೀಡುವುದಲ್ಲದೆ, ಯಾವುದೇ ರಸ್ತೆಯನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತವೆ. ಕೇವಲ 123 ಕೆಜಿ ತೂಕ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ನೊಂದಿಗೆ, ಈ ಬೈಕ್ ನಿಮಗೆ ಸುಲಭವಾದ ಹ್ಯಾಂಡ್ಲಿಂಗ್ ಮತ್ತು ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: ಹೊಸ ಟಿವಿಎಸ್ ಅಪಾಚೆ ಆರ್ಆರ್ 310 ಬಿಡುಗಡೆ
ಟಿವಿಎಸ್ ರೈಡರ್ ಐಗೋ ಎಂಜಿನ್
ಹೊಸ ಟಿವಿಎಸ್ ರೈಡರ್ ಐಜಿಒ(TVS Raider iGo) ಮಾದರಿಯು 124.8 ಸಿಸಿ ಸಾಮರ್ಥ್ಯದ, 3-ವಾಲ್ವ್ ಎಂಜಿನ್ ಹೊಂದಿದ್ದು. ಈ ಎಂಜಿನ್ 11.22 ಬಿಹೆಚ್ಪಿ ಶಕ್ತಿ ಮತ್ತು 11.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇದನ್ನು ಇತ್ತೀಚಿನ ಸಮಗ್ರ ಸ್ಟಾರ್ಟರ್ ಜನರೇಟರ್ (ISG) ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ. ಈ ವೈಶಿಷ್ಟ್ಯವು ವಾಹನಕ್ಕೆ ಪವರ್ ಮೋಡ್ನಲ್ಲಿ ಹೆಚ್ಚುವರಿ ವೇಗವನ್ನು ನೀಡುತ್ತದೆ. ಇದರ ಪರಿಣಾಮವಾಗಿ, 6,000 ಆರ್ಪಿಎಂನಲ್ಲಿ ಟಾರ್ಕ್ 11.75 ಎನ್ಎಂಗೆ ಏರುತ್ತದೆ. ಟಿವಿಎಸ್ನ ಪ್ರಕಾರ, ರೈಡರ್ ಐಜಿಒ ಮಾದರಿಯು ಇತರ ಮಾದರಿಗಳಿಗೆ ಹೋಲಿಸಿದರೆ ಸುಮಾರು 10% ಹೆಚ್ಚಿನ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.