Mahindra Thar ROXX: ಹೊಸ 5 ಡೋರ್ ಎಸ್ಯುವಿ ಬುಕ್ಕಿಂಗ್ ಆರಂಭ, ಒಂದೇ ಗಂಟೆಯಲ್ಲಿ ದಾಖಲೆಯ ಬುಕ್ಕಿಂಗ್ ಬರೆದ ಮಹೀಂದ್ರಾ
ಕಳೆದ ಆಗಸ್ಟ್ ತಿಂಗಳಲ್ಲಿ ಥಾರ್ ರಾಕ್ಸ್ 5-ಡೋರ್ ಎಂಬ ಹೊಸ ಆಫ್-ರೋಡ್ ಎಸ್ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್ಯುವಿಯ ಬುಕಿಂಗ್ ಅಧಿಕೃತವಾಗಿ ಆರಂಭವಾಗಿದ್ದು, ಭಾರೀ ಸಂಖ್ಯೆಯಲ್ಲಿ ಗ್ರಾಹಕರು ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಬುಕಿಂಗ್ನಲ್ಲಿ ಕೇವಲ ಒಂದು ಗಂಟೆಯಲ್ಲಿಯೇ 1,76,218ಕ್ಕೂ ಹೆಚ್ಚು ಬುಕಿಂಗ್ಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿ. ಈ ಅಪಾರ ಬೇಡಿಕೆಯನ್ನು ಗಮನಿಸಿದರೆ, ಮಹೀಂದ್ರಾ ಕಂಪನಿಯು ಮುಂದಿನ ಎರಡು ವಾರಗಳಲ್ಲಿ ಗ್ರಾಹಕರಿಗೆ ಹೊಸ ಕಾರುಗಳನ್ನು ತಲುಪಿಸುವ ನಿರೀಕ್ಷೆಯಲ್ಲಿದೆ.
ಕೆಲವೇ ದಿನಗಳ ಹಿಂದೆ ನಡೆದ ಹರಾಜಿನಲ್ಲಿ, ಮಹೀಂದ್ರಾ ಥಾರ್ ರಾಕ್ಸ್ ಎಸ್ಯುವಿಯ ಮೊದಲ ಮಾದರಿಯು ಅಂದಾಜು ರೂ 1.31 ಕೋಟಿಗೆ ಮಾರಾಟವಾಗಿತ್ತು. ಈಗಾಗಲೇ ಈ ವಾಹನದ ಟೆಸ್ಟ್ ಡ್ರೈವ್ ಚಾಲನೆಯ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗಿದ್ದು, ಆಸಕ್ತರು ಹತ್ತಿರದ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ವಾಹನದ ಕಾರ್ಯಕ್ಷಮತೆಯನ್ನು ನೇರವಾಗಿ ಪರೀಕ್ಷಿಸಬಹುದು.
ಇದನ್ನೂ ಓದಿ: ಮೊದಲ ಮಹೀಂದ್ರಾ ಥಾರ್ ರಾಕ್ಸ್ 1.31 ಕೋಟಿ ರೂ.ಗೆ ಮಾರಾಟ!
ಗ್ರಾಹಕರು ತಮ್ಮ ಅಗತ್ಯ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಮಹೀಂದ್ರಾ ಥಾರ್ ರಾಕ್ಸ್ ಅನ್ನು 4×2 ಅಥವಾ 4×4 ಡ್ರೈವ್ ಸಿಸ್ಟಂನೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು. ಈ ವಾಹನವು ಎಂಎಕ್ಸ್1, ಎಂಎಕ್ಸ್3, ಎಎಕ್ಸ್3 ಎಲ್, ಎಂಎಕ್ಸ್5, ಎಎಕ್ಸ್5 ಎಲ್ ಮತ್ತು ಎಎಕ್ಸ್7 ಎಲ್ ಎಂಬ ಆರು ವೈವಿಧ್ಯಮಯ ವೆರಿಯೆಂಟ್ಗಳಲ್ಲಿ ಲಭ್ಯವಿದೆ. 4×2 ವೆರಿಯೆಂಟ್ಗಳ ಬೆಲೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12.99 ಲಕ್ಷದಿಂದ ರೂ. 20.49 ಲಕ್ಷದವರೆಗೆ ಇದ್ದರೆ, 4×4 ವೆರಿಯೆಂಟ್ಗಳ ಬೆಲೆ ರೂ. 18.79 ಲಕ್ಷದಿಂದ ರೂ. 22.49 ಲಕ್ಷದವರೆಗೆ ಇದೆ.

ಮಹೀಂದ್ರಾ ಥಾರ್ ರಾಕ್ಸ್: ವೈಶಿಷ್ಟ್ಯಗಳು
ಈ ಥಾರ್ ರಾಕ್ಸ್ನ ಹೊರಭಾಗವು ಆಕರ್ಷಕ ವಿನ್ಯಾಸದಿಂದ ಕಂಗೊಳಿಸುತ್ತದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು, ‘ಸಿ’ ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಸರ್ಕ್ಯೂಲರ್ ಫಾಗ್ ಲೈಟ್ಗಳೊಂದಿಗೆ ಸ್ಪೋರ್ಟಿ ಬಂಪರ್ಗಳು ವಾಹನಕ್ಕೆ ಆಧುನಿಕ ನೋಟ ನೀಡುತ್ತವೆ. ಅಲಾಯ್ ವೀಲ್ಗಳು ಮತ್ತು ಎಲ್ಇಡಿ ಟೈಲ್ಲೈಟ್ಗಳು ಈ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದಲ್ಲದೆ, 19 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಗಳು, ಟೈಲ್ಗೇಟ್ನಲ್ಲಿ ಜೋಡಿಸಲಾದ ಸ್ಪೇರ್ ವ್ಹೀಲ್ ಮತ್ತು ಎಲ್ಇಡಿ ಟೈಲ್ಲೈಟ್ಗಳು ಈ ಕಾರಿನ ಸೌಂದರ್ಯವನ್ನು ಹೆಚ್ಚಿಸುತ್ತವೆ ಐವರು ಪ್ರಯಾಣಿಕರಿಗೆ ಸುಖಕರವಾದ ಪ್ರಯಾಣವನ್ನು ಒದಗಿಸುವ ಈ ವಾಹನವು 447 ಲೀಟರ್ನ ವಿಶಾಲವಾದ ಬೂಟ್ ಸ್ಪೇಸ್ನೊಂದಿಗೆ ಬರುತ್ತದೆ.
ಇದನ್ನೂ ಓದಿ: ಮಹೀಂದ್ರಾ ಥಾರ್ ರಾಕ್ಸ್ 4×4 ರೂಪಾಂತರಗಳಿಗಾಗಿ ಹೊಸ ಇಂಟೀರಿಯರ್ ಕಲರ್ ಅನ್ನು ಪರಿಚಯಿಸಲಾಗಿದೆ
ಈ ಕಾರಿನ ಒಳಭಾಗವು ಪ್ರಯಾಣಿಕರಿಗೆ ಐಷಾರಾಮಿ ಅನುಭವ ನೀಡುತ್ತದೆ. 10.25 ಇಂಚಿನ ದೊಡ್ಡ ಟಚ್ಸ್ಕ್ರೀನ್ನೊಂದಿಗೆ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕಿಸುವ ಸೌಲಭ್ಯವಿದೆ. ಇದರೊಂದಿಗೆ ಸಂಪೂರ್ಣವಾಗಿ ಡಿಜಿಟಲ್ ಆಗಿರುವ ಡ್ಯಾಶ್ಬೋರ್ಡ್, ಮುಂಭಾಗದ ವೆಂಟಿಲೇಟೆಡ್ ಆಸನಗಳು, ವಿಶಾಲವಾದ ಪನೋರಮಿಕ್ ಸನ್ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಅಡ್ಜಸ್ಟ್ ಒಆರ್ವಿಎಂ, ರಿಯರ್ ಡಿಫಾಗರ್, ಕಪ್ ಹೋಲ್ಡರ್ನೊಂದಿಗೆ ರಿಯರ್ ಆರ್ಮ್ ರೆಸ್ಟ್, 6 ವೇ ಪವರ್ಡ್ ಡ್ರೈವರ್ ಸೀಟ್, ಮತ್ತು ಅತ್ಯುತ್ತಮ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತೀರಿ.

ಮಹೀಂದ್ರಾ ಥಾರ್ ರಾಕ್ಸ್(Mahindra Thar Roxx) ಕಾರಿನಲ್ಲಿ ನಿಮ್ಮ ಪ್ರಯಾಣವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಆರು ಏರ್ಬ್ಯಾಗ್ಗಳು, ಇಎಸ್ಇ, ತ್ರಿಪಾಯಿಂಟ್ ಸೀಟ್ಬೆಲ್ಟ್ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಮುಂಭಾಗದ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ಲೈಟ್ಗಳು ಮತ್ತು ವೈಪರ್ಗಳು ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್ನಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ನಿಮ್ಮ ಪ್ರತಿಯೊಂದು ಪ್ರಯಾಣವನ್ನು ಸುಗಮಗೊಳಿಸುತ್ತವೆ. ಇದಲ್ಲದೆ, ಟಾಪ್-ಎಂಡ್ ಮಾದರಿಯಲ್ಲಿ ನೀಡಲಾಗಿರುವ ಲೆವಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ನಿಮಗೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಚಲಿಸಲು ಅವಕಾಶ ಮಾಡಿಕೊಡುತ್ತದೆ.
ಇದನ್ನೂ ಓದಿ: ಮಹೀಂದ್ರಾ ಥಾರ್ ರಾಕ್ಸ್ 5-ಡೋರ್ vs ಮಹೀಂದ್ರಾ ಥಾರ್ 3-ಡೋರ್ ಯಾವುದು ಬೆಸ್ಟ್ ?
ಮಹೀಂದ್ರಾ ಥಾರ್ ರಾಕ್ಸ್: ಪವರ್ಟ್ರೇನ್
Mahindra Thar Roxx 4×4 ನ 2.2-ಲೀಟರ್ ಡೀಸೆಲ್ ಎಂಜಿನ್, ಅದರ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಗಮನ ಸೆಳೆಯುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 150 bhp ಶಕ್ತಿ ಮತ್ತು 330 Nm ಟಾರ್ಕ್ ಅನ್ನು ನೀಡುವ ಈ ಎಂಜಿನ್, ಯಾವುದೇ ರಸ್ತೆಯಲ್ಲೂ ನಿಮಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಶಕ್ತಿ ಬೇಕಿದ್ದರೆ, 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ 172 bhp ಶಕ್ತಿ ಮತ್ತು 370 Nm ಟಾರ್ಕ್ನೊಂದಿಗೆ ಹೆಚ್ಚಿನ ಆವೃತ್ತಿಯನ್ನು ಆಯ್ಕೆ ಮಾಡಬಹುದು.
ನೀವು 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಮಹೀಂದ್ರಾ ಥಾರ್ ರಾಕ್ಸ್ 2WD ಮಾದರಿಯನ್ನು ಸಹ ಪಡೆಯಬಹುದು. ಇದು ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ 162 ಬಿಹೆಚ್ಪಿ ಮತ್ತು 330 ಎನ್ಎಂ ಟಾರ್ಕ್ ಅನ್ನು ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಿದಾಗ 177 ಬಿಹೆಚ್ಪಿ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ಗಳು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.