Hyundai Venue Adventure Edition ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ.
ಹ್ಯುಂಡೈ ವೆನ್ಯೂ, ಸಾಹಸ ಪ್ರಿಯರ ಹೃದಯವನ್ನು ಗೆಲ್ಲಲು ಸಜ್ಜಾಗಿದೆ. ಹ್ಯುಂಡೈ ಇಂಡಿಯಾ (Hyundai India) ಕಂಪನಿಯು ಇತ್ತೀಚೆಗೆ ವೆನ್ಯೂ ಕಾಂಪ್ಯಾಕ್ಟ್ ಎಸ್ಯುವಿಯ ಹೊಸ ಅಡ್ವೆಂಚರ್ ಎಡಿಷನ್ (Hyundai Venue Adventure Edition) ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 10.15 ಲಕ್ಷ ರೂಪಾಯಿಗಳಿಂದ (ಎಕ್ಸ್-ಶೋರೂಂ, ಭಾರತ) ಆರಂಭವಾಗುತ್ತದೆ. ಈ ವಿಶೇಷ ಆವೃತ್ತಿಯು ರೇಂಜರ್ ಖಾಕಿ ಬಣ್ಣದ ಆಯ್ಕೆಯೊಂದಿಗೆ ಬರುತ್ತದೆ, ಹೊರಗೆ ಮತ್ತು ಒಳ ಭಾಗಗಳಲ್ಲಿ ಹಲವು ಹೊಸ ಕಾಸ್ಮೆಟಿಕ್ ನವೀಕರಣಗಳನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಎಸ್ (ಒ) +, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ಮೂರು ಟ್ರಿಮ್ಗಳಲ್ಲಿ ಲಭ್ಯವಿರುವ ಈ ಎಡಿಷನ್, ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ.
ಹ್ಯುಂಡೈ ವೆನ್ಯೂ ಅಡ್ವೆಂಚರ್: ಫೀಚರ್ಸ್ ಗಳು
ವೆನ್ಯೂ ಅಡ್ವೆಂಚರ್ ಆವೃತ್ತಿಯು (Venue Adventure Edition) ಸಾಹಸ ಪ್ರಿಯರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಪ್ಪು ಬಣ್ಣದ ಅಲಾಯ್ ವೀಲ್ಗಳು, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್ಗಳು, ರೂಫ್ ರೈಲ್ಗಳು, ವಿಂಗ್ ಮಿರರ್ಗಳು ಮತ್ತು ಶಾರ್ಕ್ ಫಿನ್ ಆಂಟೆನಾಗಳು ವಾಹನಕ್ಕೆ ಒಂದು ಭರ್ಜರಿ ನೋಟವನ್ನು ನೀಡುತ್ತವೆ. ಬಾಗಿಲುಗಳ ಮೇಲಿನ ಹೆಚ್ಚುವರಿ ಸೈಡ್ ಕ್ಲಾಡಿಂಗ್ ಮತ್ತು ಕೆಂಪು ಬಣ್ಣದ ಮುಂಭಾಗದ ಬ್ರೇಕ್ ಕ್ಯಾಲಿಪರ್ಗಳು ಈ ಆವೃತ್ತಿಯನ್ನು ಇನ್ನಷ್ಟು ವಿಶಿಷ್ಟವಾಗಿಸುತ್ತವೆ. ಮುಂಭಾಗದ ಫೆಂಡರ್ನಲ್ಲಿರುವ ಅಡ್ವೆಂಚರ್ ಎಡಿಶನ್ ಎಂಬ್ಲೆಮ್ ಮತ್ತು ಕಪ್ಪು ಬಣ್ಣದ ಹುಂಡೈ ಲೋಗೋ ಈ ವಾಹನಕ್ಕೆ ಒಂದು ವಿಶಿಷ್ಟ ನೋಟವನ್ನು ನೀಡುತ್ತವೆ.
ಇದನ್ನೂ ಓದಿ: ಹುಂಡೈ ವೆನ್ಯೂ ಎಸ್(ಒ) ಪ್ಲಸ್ ಸನ್ರೂಫ್ನೊಂದಿಗೆ 10 ಲಕ್ಷ ರೂಪಾಯಿಗೆ ಬಿಡುಗಡೆ

ಕಾರಿನ ಆಂತರಿಕ ಸೌಂದರ್ಯವನ್ನು ಹೆಚ್ಚಿಸಲು, ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಕ್ಯಾಬಿನ್ಗೆ ಸೆಜ್ ಗ್ರೀನ್ ಬಣ್ಣದ ಆಕರ್ಷಕ ಸಂಯೋಜನೆಯನ್ನು ನೀಡಲಾಗಿದೆ. ವಿಶೇಷವಾಗಿ, ಸೀಟುಗಳಿಗೆ ಸೆಜ್ ಗ್ರೀನ್ ಬಣ್ಣದ ಹೈಲೈಟ್ಗಳೊಂದಿಗೆ ಅಡ್ವೆಂಚರ್ ಎಡಿಷನ್ಗೆ ಮಾತ್ರ ಸಿಗುವ ವಿಶಿಷ್ಟ ಅಪ್ಹೋಲ್ಸ್ಟ್ರಿಯನ್ನು ಬಳಸಲಾಗಿದೆ. ಇದಲ್ಲದೆ, 3D ಮ್ಯಾಟ್ಸ್, ಸ್ಪೋರ್ಟಿ ಪೆಡಲ್ಗಳು ಮತ್ತು ಹ್ಯುಂಡೈಯ ವಿಶಿಷ್ಟ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್ಕ್ಯಾಮ್ ವ್ಯವಸ್ಥೆಯನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.
ವೆನ್ಯೂ ಅಡ್ವೆಂಚರ್ ಆವೃತ್ತಿಯು ಈಗ ಹೊಸ ರೇಂಜರ್ ಕಾಕಿ ಬಣ್ಣವನ್ನು ಒಳಗೊಂಡಂತೆ ವೈವಿಧ್ಯಮಯ ಬಣ್ಣ ಆಯ್ಕೆಗಳೊಂದಿಗೆ ಲಭ್ಯವಿದೆ. ಗ್ರಾಹಕರು ಮೂರು ಮೊನೊಟೋನ್ ಬಣ್ಣಗಳಾದ ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಅಥವಾ ಮೂರು ಆಕರ್ಷಕ ಡ್ಯುಯಲ್-ಟೋನ್ ಆಯ್ಕೆಗಳಾದ ರೇಂಜರ್ ಕಾಕಿ ಬ್ಲ್ಯಾಕ್ ರೂಫ್, ಅಟ್ಲಾಸ್ ವೈಟ್ ಬ್ಲ್ಯಾಕ್ ರೂಫ್ ಮತ್ತು ಟೈಟಾನ್ ಗ್ರೇ ಬ್ಲ್ಯಾಕ್ ರೂಫ್ಗಳಿಂದ ಆಯ್ಕೆ ಮಾಡಿಕೊಳ್ಳಬಹುದು. SX ಮತ್ತು SX(O) ಟ್ರಿಮ್ಗಳಲ್ಲಿ ಡ್ಯುಯಲ್-ಟೋನ್ ಬಣ್ಣಗಳನ್ನು ಆಯ್ಕೆ ಮಾಡಲು ರೂ. 15,000 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಸನ್ರೂಫ್ನೊಂದಿಗೆ ಹ್ಯುಂಡೈ ವೆನ್ಯೂ ಇ ಪ್ಲಸ್ ವೇರಿಯೆಂಟ್ ಬಿಡುಗಡೆ
ಹ್ಯುಂಡೈ ವೆನ್ಯೂ ಅಡ್ವೆಂಚರ್: ಪವರ್ಟ್ರೇನ್
ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ (Hyundai Venue Adventure Edition) ಎರಡು ಬಗೆಯ ಪೆಟ್ರೋಲ್ ಎಂಜಿನ್ಗಳೊಂದಿಗೆ ಲಭ್ಯವಿದೆ. 83 ಬಿಹೆಚ್ಪಿ ಶಕ್ತಿ ಹೊಂದಿರುವ 1.2 ಲೀಟರ್, ನಾಲ್ಕು ಸಿಲಿಂಡರ್ಗಳ ನೈಸರ್ಗಿಕ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ಗೆ ಮ್ಯಾನುವಲ್ ಗೇರ್ಬಾಕ್ಸ್ ಜೋಡಿಸಲಾಗಿದೆ. ಈ ಆಯ್ಕೆ ಎಸ್(ಒ)+ ಮತ್ತು ಎಸ್ಎಕ್ಸ್ ಟ್ರಿಮ್ಗಳಲ್ಲಿ ಲಭ್ಯವಿದೆ. ಮತ್ತು 120 ಬಿಹೆಚ್ಪಿ ಶಕ್ತಿ ಹೊಂದಿರುವ 1.0 ಲೀಟರ್, ಮೂರು ಸಿಲಿಂಡರ್ಗಳ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ಗೆ 7 ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ ಜೋಡಿಸಲಾಗಿದೆ. ಈ ಆಯ್ಕೆ ಎಸ್ಎಕ್ಸ್(ಒ) ಟ್ರಿಮ್ನಲ್ಲಿ ಮಾತ್ರ ಲಭ್ಯವಿದೆ.