Honda ಕಾರುಗಳಲ್ಲಿ ಇಂಧನ ಪಂಪ್ ಸಮಸ್ಯೆ: ಹೋಂಡಾ ಸಿಟಿ, ಅಮೇಜ್, ಬ್ರಿಯೋ, ಬಿಆರ್-ವಿ, ಡಬ್ಲ್ಯುಆರ್-ವಿ, ಜಾಝ್ ಮತ್ತು ಅಕಾರ್ಡ್ ನಂತಹ ಹೊಸ ಮತ್ತು ಹಳೆಯ ಕಾರುಗಳ ಎಲ್ಲಾ ಪ್ರಮುಖ ಮಾದರಿಗಳನ್ನು ಹಿಂಪಡೆಯುತ್ತಿದೆ.
ಹೊಂಡಾ ಕಾರ್ಸ್ ಇಂಡಿಯಾ (HCIL) ತನ್ನ ಗ್ರಾಹಕರ ಸುರಕ್ಷತೆಯನ್ನು ಮುಖ್ಯವಾಗಿ ಪರಿಗಣಿಸಿ, ಸುಮಾರು 90,468 ಕಾರುಗಳಲ್ಲಿ ಇಂಧನ ಪಂಪ್ ಅನ್ನು ಬದಲಿಸಲು ಸ್ವಯಂಪ್ರೇರಿತವಾಗಿ ವಾಪಸು ಕರೆಯುವ ನಿರ್ಧಾರವನ್ನು ಕೈಗೊಂಡಿದೆ. ಈ ವಾಪಸು ಕರೆ ಹಿಂದಿನ ಮಾದರಿಗಳಾದ ಹೊಂಡಾ ಸಿಟಿ(Honda City), ಅಮೇಜ್, ಬ್ರಿಯೊ, BR-V, WR-V, ಜಾಝ್ ಮತ್ತು ಅಕಾರ್ಡ್ ಸೇರಿದಂತೆ ಹಲವು ಮಾದರಿಗಳಿಗೆ ಅನ್ವಯಿಸುತ್ತದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹಿಂದೆ ರಿಪೇರಿ ಮಾಡಿದ 2,204 ಹಳೆಯ ಮಾದರಿಗಳನ್ನೂ ಸಹ ಈ ವಾಪಸು ಕರೆಯಲ್ಲಿ ಸೇರಿಸಲಾಗಿದೆ. ಆದಾಗ್ಯೂ, ಹೊಸ ಹೊಂಡಾ ಎಲಿವೇಟ್ ಮತ್ತು ಹಳೆಯ ಮೊಬಿಲಿಯೊ ಮಾದರಿಗಳು ಈ ವಾಪಸು ಕರೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಇದನ್ನೂ ಓದಿ: ಹಬ್ಬಕ್ಕೆ ಜನಪ್ರಿಯ ಹೋಂಡಾ ಕಾರುಗಳ ಮೇಲೆ ಮೆಗಾ ಡಿಸ್ಕೌಂಟ್ ಆಫರ್ಗಳು
ಹೊಂಡಾ ಕಾರುಗಳಲ್ಲಿ ಇಂಧನ ಪಂಪ್ ಸಮಸ್ಯೆ
ಹೊಂಡಾ(Honda) ಕಂಪನಿಯು 2017ರ ಸೆಪ್ಟೆಂಬರ್ ಮತ್ತು 2018ರ ಜೂನ್ ಅವಧಿಯಲ್ಲಿ ಉತ್ಪಾದಿಸಿದ ಕೆಲವು ಮಾದರಿಯ ಕಾರುಗಳ ಇಂಧನ ಪಂಪ್ನಲ್ಲಿ ಒಂದು ತಾಂತ್ರಿಕ ದೋಷವನ್ನು ಗಮನಿಸಿದೆ. ಈ ದೋಷದಿಂದಾಗಿ ಕೆಲವು ವಾಹನಗಳು ಸ್ಟಾರ್ಟ್ ಆಗದಿರಬಹುದು ಅಥವಾ ಚಾಲನೆಯ ಸಮಯದಲ್ಲಿ ಇಂಜಿನ್ ನಿಂತು ಹೋಗುವ ಸಾಧ್ಯತೆ ಇದೆ.
ಗ್ರಾಹಕರ ಸುರಕ್ಷತೆ ನಮ್ಮ ಆದ್ಯತೆ. ಹೀಗಾಗಿ, ಈ ಸಮಸ್ಯೆಯನ್ನು ನಿವಾರಿಸಲು ಹೊಂಡಾ ಕಂಪನಿಯು ಭಾರತದಾದ್ಯಂತ ತನ್ನ ಅಧಿಕೃತ ಡೀಲರ್ಶಿಪ್ಗಳಲ್ಲಿ ಉಚಿತ ದುರಸ್ತಿ ಸೇವೆಯನ್ನು 2024ರ ನವೆಂಬರ್ 5ರಿಂದ ಆರಂಭಿಸಲಿದೆ. ಈ ಸಮಸ್ಯೆಯಿಂದ ಪ್ರಭಾವಿತವಾಗಿರುವ ವಾಹನ ಮಾಲೀಕರನ್ನು ನಾವು ನೇರವಾಗಿ ಸಂಪರ್ಕಿಸಿ, ದುರಸ್ತಿಗೆ ಅಪಾಯಿಂಟ್ಮೆಂಟ್ ನೀಡಲಿದ್ದೇವೆ ಎಂದು ಹೊಂಡಾ ಇಂಡಿಯಾ ತಿಳಿಸಿದ್ದಾರೆ.
Honda ವಾಹನದ ಮಾಲೀಕರೇ, ನಿಮ್ಮ ವಾಹನವು ವಾಪಸಿಗೆ ಒಳಪಟ್ಟಿದೆಯೇ ಎಂದು ತಿಳಿಯಲು ನೀವು ಸುಲಭವಾಗಿ ಪರಿಶೀಲಿಸಬಹುದು. ಹೊಂಡಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಿಮ್ಮ 17 ಅಂಕೆಯ ವಾಹನ ಗುರುತಿನ ಸಂಖ್ಯೆಯನ್ನು (VIN) ನಮೂದಿಸಿ. 2017 ಜೂನ್ ಮತ್ತು 2023 ಅಕ್ಟೋಬರ್ ನಡುವೆ ಅಧಿಕೃತ ಹೊಂಡಾ ಕಾರುಗಳ ಡೀಲರ್ಗಳಿಂದ ಇಂಧನ ಪಂಪ್ ಅಸೆಂಬ್ಲಿಯನ್ನು ಖರೀದಿಸಿದ್ದರೆ, ನಿಮ್ಮ ವಾಹನವನ್ನು ಹತ್ತಿರದ ಹೊಂಡಾ ಕಾರುಗಳ ಡೀಲರ್ಶಿಪ್ನಲ್ಲಿ ಪರಿಶೀಲಿಸಬಹುದು.
ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA)ದ ವರದಿಯ ಪ್ರಕಾರ, ಹೆಚ್ಚಿನ ಒತ್ತಡದ ಇಂಧನ ಪಂಪ್ಗಳ ತಯಾರಿಕೆಯಲ್ಲಿ ಕೆಲವು ಗುಣಮಟ್ಟದ ಸಮಸ್ಯೆಗಳು ಕಂಡುಬಂದಿವೆ. ಈ ಪಂಪ್ಗಳಲ್ಲಿ ಬಿರುಕುಗಳು ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಪಂಪ್ ಕಾರ್ಯನಿರ್ವಹಿಸುತ್ತಿದ್ದಂತೆ ಈ ಬಿರುಕುಗಳು ಹೆಚ್ಚಾಗುವ ಸಂಭವವಿದೆ. ಇದರಿಂದಾಗಿ ಇಂಧನ ಸೋರಿಕೆಯಾಗುವ ಅಪಾಯವಿದ್ದು, ಇದು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಹೋಂಡಾ ಎಲಿವೇಟ್ ಅಪೆಕ್ಸ್ ಎಡಿಷನ್ ಬಿಡುಗಡೆ
ಹೊಂಡಾ ಕಂಪನಿ 2017-2018ರ ಮಧ್ಯೆ ತಯಾರಿಸಲಾದ ಮಾದರಿಗಳು
2017ರ ಸೆಪ್ಟೆಂಬರ್ 19ರಿಂದ 2018ರ ಜೂನ್ 30ರವರೆಗೆ ಉತ್ಪಾದಿಸಲಾದ ಅಮೇಜ್ ಮಾದರಿಯ 18,851 ವಾಹನಗಳು, 2017ರ ಆಗಸ್ಟ್ 8ರಿಂದ 2018ರ ಜೂನ್ 27ರವರೆಗೆ ಉತ್ಪಾದಿಸಲಾದ ಬ್ರಿಯೋ ಮಾದರಿಯ 3,317 ವಾಹನಗಳು, 2017ರ ಸೆಪ್ಟೆಂಬರ್ 26ರಿಂದ 2018ರ ಜೂನ್ 14ರವರೆಗೆ ಉತ್ಪಾದಿಸಲಾದ BR-V ಮಾದರಿಯ 4,386 ವಾಹನಗಳು ಹಾಗೂ 2017ರ ಸೆಪ್ಟೆಂಬರ್ 4ರಿಂದ 2018ರ ಜೂನ್ 29ರವರೆಗೆ ಉತ್ಪಾದಿಸಲಾದ ಸಿಟಿ ಮಾದರಿಯ 32,872 ವಾಹನಗಳು ಈ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಭಾವಿತವಾಗಿವೆ ಎಂದು ತಿಳಿದುಬಂದಿದೆ.
2017ರ ಸೆಪ್ಟೆಂಬರ್ 4ರಿಂದ 2018ರ ಜೂನ್ 29ರವರೆಗೆ ತಯಾರಿಸಲಾದ 16,744 ಜಾಝ್ ಕಾರುಗಳು ಮತ್ತು 2017ರ ಸೆಪ್ಟೆಂಬರ್ 5ರಿಂದ 2018ರ ಜೂನ್ 30ರವರೆಗೆ ತಯಾರಿಸಲಾದ 14,298 WR-V ಕಾರುಗಳು ಈ ತಾಂತ್ರಿಕ ಸಮಸ್ಯೆಯಿಂದ ಪ್ರಭಾವಿತವಾಗಿವೆ ಎಂದು ಕಂಪನಿ ತಿಳಿಸಿದೆ. ಈ ವಾಹನಗಳ ಜೊತೆಗೆ, ಹೊಂಡಾ ಕಂಪನಿಯು ಅಕಾರ್ಡ್, ಅಮೇಜ್, ಬ್ರಿಯೋ, ಬಿಆರ್-ವಿ, ಸಿಟಿ, ಸಿವಿಕ್, ಜ್ಯಾಜ್ ಮತ್ತು ಡಬ್ಲ್ಯುಆರ್-ವಿ ಸೇರಿದಂತೆ ಹಲವು ಮಾದರಿಗಳ 2,204 ವಾಹನಗಳಲ್ಲಿ ಸ್ಪೇರ್ ಪಾರ್ಟ್ಸ್ಗಳನ್ನು ಬದಲಿಸಿದೆ.