Citroen C3: ಸಿಟ್ರೊಯೆನ್ C3 ಆಟೋಮ್ಯಾಟಿಕ್ ರೂ 9.99 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ

Citroen C3 Automatic ಟ್ರಾನ್ಸ್‌ಮಿಷನ್ ಕಾರಿನ ಬೆಲೆ 9.99 ಲಕ್ಷದಿಂದ 10.27 ಲಕ್ಷ ರೂ

ಸಿಟ್ರೊಯೆನ್ (Citroen) ಕಂಪನಿಯು ತನ್ನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ C3 ಹ್ಯಾಚ್‌ಬ್ಯಾಕ್ ಕಾರಿನ ಸ್ವಯಂಚಾಲಿತ ಮಾದರಿಗಳನ್ನು ಪರಿಚಯಿಸಿದ್ದು, ಅವುಗಳ ಬೆಲೆಯನ್ನು ಇತ್ತೀಚೆಗೆ ಪ್ರಕಟಿಸಿದೆ. ಈ ವರ್ಷ ಆಗಸ್ಟ್‌ನಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್  ಮಾದರಿಗಳನ್ನು ಬಿಡುಗಡೆ ಮಾಡಿದ್ದ ಕಂಪನಿ, ಈಗ ಸಿಟ್ರೊಯೆನ್ C3 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (Citroen C3 Automatic) ಮಾದರಿಗಳನ್ನೂ ಲಭ್ಯಗೊಳಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಟರ್ಬೋ ಶೈನ್ ಟ್ರಿಮ್‌ನಲ್ಲಿ ಲಭ್ಯವಿರುವ ಈ ಮಾದರಿಗಳಲ್ಲಿ, ಶೈನ್ ಮಾದರಿಯ ಬೆಲೆ 9.99 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇತರ ಮಾದರಿಗಳಾದ ಶೈನ್ ಎಟಿ ವೈಬ್ ಪ್ಯಾಕ್, ಶೈನ್ ಎಟಿ ಡ್ಯುಯಲ್ ಟೋನ್ ಮತ್ತು ಶೈನ್ ಎಟಿ ಡ್ಯುಯಲ್ ಟೋನ್ ವೈಬ್ ಪ್ಯಾಕ್‌ಗಳ ಬೆಲೆಗಳು ಕ್ರಮವಾಗಿ 10.12 ಲಕ್ಷ, 10.15 ಲಕ್ಷ ಮತ್ತು 10.27 ಲಕ್ಷ ರೂಪಾಯಿಗಳಾಗಿವೆ. ಈ ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ.

ಇದನ್ನೂ ಓದಿ: ಬಜೆಟ್‌ಗೆ ಸರಿಹೊಂದುವ ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪೆ ಬಿಡುಗಡೆ

ಸಿಟ್ರೊಯೆನ್ C3: ವೈಶಿಷ್ಟ್ಯಗಳು

ಸಿಟ್ರನ್ ಸಿ3(Citroen C3) ಹ್ಯಾಚ್‌ಬ್ಯಾಕ್‌ನ ಹೊರಗಿನ ವಿನ್ಯಾಸ ಹಳೆಯ ಮಾದರಿಯಂತೆಯೇ ಇದೆ, ಆದರೆ ಈಗ ಟಾಪ್-ಸ್ಪೆಕ್ ಶೈನ್ ಟ್ರಿಮ್‌ನಲ್ಲಿ ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಸೇರಿಸುವ ಮೂಲಕ ಕಾರಿನ ಮುಖಭಾಗಕ್ಕೆ ಹೊಸ ನೋಟ ನೀಡಲಾಗಿದೆ. ಮತ್ತೊಂದು ಸಣ್ಣ ಬದಲಾವಣೆ ಎಂದರೆ, ಎಲೆಕ್ಟ್ರಿಕಲ್  ಅಡ್ಜಸ್ಟಬಲ್ ಸೈಡ್  ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್ ಅನ್ನುಅಳವಡಿಸಲಾಗಿದೆ, ಇದು ಶೈನ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಹಿಂದಿನ ಸೈಡ್ ಮಿರರ್‌ಗಳಿದ್ದ ಜಾಗದಲ್ಲಿ ಈಗ ಹೊಸ ಸಿಟ್ರನ್ ಬ್ಯಾಡ್ಜ್ ಕಾಣಿಸುತ್ತದೆ ಮತ್ತು 15-ಇಂಚಿನ ಅಲಾಯ್ ವೀಲ್ಗಳನ್ನು ಒಳಗೊಂಡಿದೆ.

Citroen C3
Citroen C3

ಕಾರಿನ ಒಳಭಾಗವು 10.2-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸುಸಜ್ಜಿತವಾಗಿದ್ದು, 7.0-ಇಂಚಿನ ಡಿಜಿಟಲ್ ಡಿಸ್ಪ್ಲೇ ನಿಮ್ಮ ವಾಹನದ ಎಲ್ಲಾ ಪ್ರಮುಖ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಪವರ್ ವಿಂಡೋ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಲಭ್ಯವಿರುತ್ತದೆ. C3 Turbo AT ಮಾದರಿಯನ್ನು ಆರಿಸುವ ಮೂಲಕ ನೀವು MyCitroen ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಕಾರನ್ನು ನಿಯಂತ್ರಿಸಬಹುದು. ಈ ಅಪ್ಲಿಕೇಶನ್ ನಿಮ್ಮ ಕಾರನ್ನು ಲಾಕ್/ಅನ್‌ಲಾಕ್ ಮಾಡುವುದು, ಕಾರಿನ ಸ್ಥಳವನ್ನು ಪತ್ತೆಹಚ್ಚುವುದು ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.

ಆಧುನಿಕ ವಾಹನಗಳು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿನ ಆದ್ಯತೆಯಾಗಿ ಪರಿಗಣಿಸುತ್ತವೆ. ಈ ನಿಟ್ಟಿನಲ್ಲಿ, ವಾಹನಗಳು ವಿವಿಧ ರೀತಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ESP, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಆಂಕಾರೇಜ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, 3-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಸೇರಿವೆ. ಈ ವೈಶಿಷ್ಟ್ಯಗಳು ರಸ್ತೆಯಲ್ಲಿ ಪ್ರಯಾಣಿಸುವಾಗ ನಿಮ್ಮ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಸಿಟ್ರೊಯೆನ್ ಸಿ3 ಮತ್ತು ಸಿ3 ಏರ್ಕ್ರಾಸ್ ಕಾರುಗಳ ಹೊಸ ವಿಶೇಷತೆಗಳು

ಸಿಟ್ರೊಯೆನ್ C3: ಪವರ್‌ಟ್ರೇನ್

ಸಿಟ್ರೊಯೆನ್ C3 ಆಟೋಮ್ಯಾಟಿಕ್ (Citroen C3 Automatic) ಮಾದರಿಯು ಈಗ ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಅವತಾರದಲ್ಲಿ ಬಂದಿದೆ. ಈ ಎಂಜಿನ್‌ಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಸಿಟ್ರೊಯೆನ್ C3 ಏರ್‌ಕ್ರಾಸ್ ಮತ್ತು ಬಸಾಲ್ಟ್ ಕೂಪೆ SUV ಮಾದರಿಗಳಲ್ಲೂ ಬಳಸಲಾಗಿದೆ. ಈ ಸಂಯೋಜನೆಯು 5,500 rpm ನಲ್ಲಿ 108 bhp ಗರಿಷ್ಠ ಶಕ್ತಿ ಮತ್ತು 1,750-2,500 rpm ನಡುವೆ 205 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್ ಆಯ್ಕೆಯು ಕೂಡಾ  ಲಭ್ಯವಿದೆ. ಈ ಆಯ್ಕೆಯಲ್ಲಿ 1,750 rpm ನಲ್ಲಿ 190 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Leave a Comment