Ola Electric: ಓಲಾ ಇ-ಸ್ಕೂಟರ್ ವಿರುದ್ಧ 10 ಸಾವಿರ ದೂರುಗಳು, ಕಂಪನಿಗೆ ನೋಟಿಸ್

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಿಂದ (ಸಿಸಿಪಿಎ) Ola Electric ಗೆ ಶೋಕಾಸ್ ನೋಟಿಸ್.

ಕಳೆದ ಹನ್ನೆರಡು ತಿಂಗಳ ಅವಧಿಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗುಣಮಟ್ಟದಲ್ಲಿನ ಕುಸಿತ ಹಾಗೂ ವಿಳಂಬವಾದ ಗ್ರಾಹಕ ಸೇವೆಗಳಿಂದಾಗಿ ಸಾವಿರಾರು ಗ್ರಾಹಕರು ತೀವ್ರ ತೊಂದರೆ ಅನುಭವಿಸಿದ್ದು, ಈ ಸಂಬಂಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಅಪಾರ ಪ್ರಮಾಣದ ದೂರುಗಳು ಬಂದಿವೆ. ಈ ದೂರುಗಳ ಆಧಾರದ ಮೇಲೆ ಪ್ರಾಧಿಕಾರವು ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ನಿರ್ದೇಶಿಸಿದೆ.

ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ಗ್ರಾಹಕರ ಸೇವೆಯಲ್ಲಿನ ಕೊರತೆ, ತಪ್ಪು ಮಾಹಿತಿ ನೀಡುವ ಜಾಹೀರಾತುಗಳು, ಅನ್ಯಾಯದ ವ್ಯಾಪಾರ ಪದ್ಧತಿಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮುಂತಾದ ಅಪರಾಧಗಳನ್ನು ಎಸಗಿದೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಆರೋಪಿಸಿದೆ. ಈ ಎಲ್ಲಾ ಆರೋಪಗಳು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಬರುತ್ತವೆ. ಹೀಗಾಗಿ, ಅಕ್ಟೋಬರ್ 3ರಂದು ಕಂಪನಿಯು ಶೋಕಾಸ್ ನೋಟಿಸ್ ಅನ್ನು ಸ್ವೀಕರಿಸಿದೆ. ಈ ನೋಟಿಸ್‌ಗೆ 15 ದಿನಗಳೊಳಗೆ ಓಲಾ ಕಂಪನಿಯು ಉತ್ತರಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಓಲಾ ಕಂಪನಿಯ ರೋಡ್‌ಸ್ಟರ್ ಸರಣಿಯ ಎಲೆಕ್ಟ್ರಿಕ್ ಬೈಕ್ ರೂ. 75,000 ಕ್ಕೆ ಬಿಡುಗಡೆ

ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು, ಕಳೆದ ಒಂದು ವರ್ಷದ ಅವಧಿಯಲ್ಲಿ ಓಲಾ ಇ-ಸ್ಕೂಟರ್‌ಗಳ ಬ್ಯಾಟರಿ ಬಾಳಿಕೆ, ಚಾರ್ಜಿಂಗ್ ಸಮಸ್ಯೆಗಳು ಮತ್ತು ಸೇವಾ ಕೇಂದ್ರಗಳ ಕೊರತೆ ಇತ್ಯಾದಿ ಸೇವಾ ಸಮಸ್ಯೆಗಳ ಕುರಿತು 10,644 ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳು 2023ರ ಸೆಪ್ಟೆಂಬರ್ 1ರಿಂದ 2024ರ ಆಗಸ್ಟ್ 30ರವರೆಗಿನ ಅವಧಿಯನ್ನು ಒಳಗೊಂಡಿದ್ದು, ಇದು ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಗ್ರಾಹಕ ಅಸಮಾಧಾನವನ್ನು ಸೂಚಿಸುತ್ತದೆ.

ಒಟ್ಟು ದೂರುಗಳಲ್ಲಿ ಮೂರನೇ ಒಂದು ಭಾಗದಷ್ಟು, ಅಂದರೆ 3,389 ದೂರುಗಳು ಇ-ಸ್ಕೂಟರ್‌ಗಳ ಸೇವಾ ವಿಳಂಬಕ್ಕೆ ಸಂಬಂಧಿಸಿವೆ. ಹೊಸ ವಾಹನಗಳ ವಿತರಣೆಯ ವಿಳಂಬಕ್ಕೆ ಸಂಬಂಧಿಸಿದಂತೆ 1,899 ಮತ್ತು ಭರವಸೆ ನೀಡಿದ ಸೇವೆಗಳು ಒದಗಿಸದ ಕುರಿತು 1,459 ದೂರುಗಳು ದಾಖಲಾಗಿವೆ.

ಇದನ್ನೂ ಓದಿ: ಕೋಮಾಕಿ ಎಕ್ಸ್-ಒನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರೂ. 49,999 ಬೆಲೆಗೆ ಬಿಡುಗಡೆ

ಗ್ರಾಹಕರು ತಮ್ಮ ದೂರುಗಳಲ್ಲಿ ಈ ಕಂಪನಿಯು ಉತ್ಪಾದನಾ ದೋಷಗಳಿರುವ ಹೊಸ ವಾಹನಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಳೆಯ ವಾಹನಗಳನ್ನು ಹೊಸದೆಂದು ತೋರಿಸಿ ಮಾರಾಟ ಮಾಡುವ ಪ್ರಕರಣಗಳು ಕೂಡ ವರದಿಯಾಗಿವೆ. ಗ್ರಾಹಕರು ಬುಕಿಂಗ್ ರದ್ದುಪಡಿಸಿದಾಗ, ಭಾಗಶಃ ಅಥವಾ ಯಾವುದೇ ಮರುಪಾವತಿ ಇಲ್ಲದಿರುವುದು ಎಂಬ ದೂರುಗಳು ಕೇಳಿಬಂದಿವೆ.

ಸರ್ವಿಸ್ ಮಾಡಿಸಿದರೂ ವಾಹನದಲ್ಲಿ ಮತ್ತೆ ಮತ್ತೆ ಅದೇ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುವುದು, ತಪ್ಪಾದ ಬಿಲ್ ನೀಡುವುದು ಹಾಗೂ ಬ್ಯಾಟರಿ ಮತ್ತು ಇತರ ಭಾಗಗಳಲ್ಲಿ ಸಮಸ್ಯೆಗಳಿರುವುದು ಎಂಬ ಆರೋಪಗಳು ಕೂಡ ಈ ನೋಟಿಸ್‌ನಲ್ಲಿ ಸೇರಿವೆ.

ಇದಲ್ಲದೆ, Ola Electric ಕಂಪನಿಯು ಉಚಿತವಾಗಿ ನೀಡಬೇಕಾದ ಸೇವೆಗಳಿಗೆ ಶುಲ್ಕ ವಿಧಿಸುತ್ತಿದೆ. ನಿಗದಿತ ಸಮಯದೊಳಗೆ ಸೇವೆಗಳು ಲಭ್ಯವಾಗುತ್ತಿಲ್ಲ. ಗ್ರಾಹಕರಿಗೆ ಸೂಕ್ತವಾದ ಸೇವೆ ದೊರೆಯುತ್ತಿಲ್ಲ. ಉತ್ಪನ್ನದ ಖಾತರಿ ಅವಧಿಯಲ್ಲಿ ಉಂಟಾಗುವ ದೋಷಗಳಿಗೆ ಸರಿಯಾದ ಸೇವೆ ನೀಡುತ್ತಿಲ್ಲ. ಸೇವೆಯ ನಂತರವೂ ಸ್ಕೂಟರ್‌ನಲ್ಲಿ ಹೊಸ ದೋಷಗಳು ಕಂಡುಬರುತ್ತಿವೆ. ಈ ಎಲ್ಲಾ ಸಮಸ್ಯೆಗಳ ಕುರಿತು ಗ್ರಾಹಕರು ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Leave a Comment