ದ್ವಿಚಕ್ರ ವಾಹನ ತಯಾರಕ ದಿಗ್ಗಜ ಬಜಾಜ್ ಆಟೋ(Bajaj Auto), ಫ್ಲಿಪ್ಕಾರ್ಟ್ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಸಂಪೂರ್ಣ ಮೋಟಾರ್ಸೈಕಲ್ ಶ್ರೇಣಿಯನ್ನು ಈ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಲಭ್ಯಗೊಳಿಸಿದೆ.
ಬಜಾಜ್ ಆಟೋ(Bajaj Auto) ಮತ್ತು ಫ್ಲಿಪ್ಕಾರ್ಟ್(Flipkart) ಜೊತೆಗಿನ ಒಪ್ಪಂದದ ಮೂಲಕ, ಈಗ ನೀವು ಫ್ಲಿಪ್ಕಾರ್ಟ್ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ 100cc ರಿಂದ 400cc ವರೆಗಿನ (ಎಕ್ಸ್-ಶೋರೂಂ ಬೆಲೆ) ರೂ. 69,000 ರಿಂದ ರೂ. 2.31 ಲಕ್ಷಗಳವರೆಗಿನ ಬೆಲೆಯಲ್ಲಿ ಯಾವುದೇ ಬಜಾಜ್ ಮೋಟಾರ್ಸೈಕಲ್ ಅನ್ನು ಆಯ್ಕೆ ಮಾಡಬಹುದು ಮತ್ತು ಬುಕ್ ಮಾಡಬಹುದು. ಪಲ್ಸರ್, ಡೊಮಿನಾರ್, ಅವೆಂಜರ್, ಪ್ಲಾಟಿನಾ ಮತ್ತು CT ಸೇರಿದಂತೆ ಬಜಾಜ್ನ ಎಲ್ಲಾ ಜನಪ್ರಿಯ ಮೋಟಾರ್ಸೈಕಲ್ ಮಾದರಿಗಳನ್ನು ಗ್ರಾಹಕರು ಫ್ಲಿಪ್ಕಾರ್ಟ್ ಮೂಲಕ ಆಯ್ಕೆ ಮಾಡಿ ಖರೀದಿಸಬಹುದು.
ಈ ಸೌಲಭ್ಯ ಆರಂಭಿಕ ಹಂತದಲ್ಲಿ, 25 ನಗರಗಳ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಶೀಘ್ರದಲ್ಲೇ ಇದನ್ನು ದೇಶಾದ್ಯಂತ ವಿಸ್ತರಿಸುವ ಯೋಜನೆ ಕಂಪನಿ ಹೊಂದಿದೆ. ಫ್ಲಿಪ್ಕಾರ್ಟ್ನಲ್ಲಿ ಮೋಟಾರ್ಸೈಕಲ್ ಖರೀದಿಸುವುದರಿಂದ ಗ್ರಾಹಕರಿಗೆ ಹಲವಾರು ಪ್ರಯೋಜನಗಳು ಸಿಗಲಿವೆ. ಮನೆಯಿಂದಲೇ ವಿವಿಧ ಮಾದರಿಗಳನ್ನು ಹೋಲಿಸಿ ಆಯ್ಕೆ ಮಾಡುವ ಅನುಕೂಲತೆ, ಉತ್ತಮ ಬೆಲೆಗಳು ಮತ್ತು ಆಕರ್ಷಕ ಆಫರ್ಗಳ ಲಭ್ಯತೆ ಇವುಗಳಲ್ಲಿ ಸೇರಿವೆ.
ಈ ಹೊಸ ಒಪ್ಪಂದವು ಭಾರತದಲ್ಲಿ ಆನ್ಲೈನ್ ಮೋಟಾರ್ಸೈಕಲ್ ಮಾರಾಟದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಮತ್ತು ಆಯ್ಕೆಗಳನ್ನು ಒದಗಿಸುವ ಮೂಲಕ, ಈ ಕ್ರಮವು ದ್ವಿಚಕ್ರ ವಾಹನ ಖರೀದಿ ಪ್ರಕ್ರಿಯೆಯನ್ನು ಸುಲಭ ಮತ್ತು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಫ್ಲಿಪ್ಕಾರ್ಟ್ನಲ್ಲಿ ಮೋಟಾರ್ಸೈಕಲ್ ಖರೀದಿಸುವ ಗ್ರಾಹಕರಿಗೆ ಹಲವಾರು ಆಕರ್ಷಕ ಆಫರ್ಗಳು ಲಭ್ಯವಿವೆ. ಇದರಲ್ಲಿ ರೂ. 5,000 ತಕ್ಷಣದ ರಿಯಾಯಿತಿ, 12 ತಿಂಗಳಿನ ನೋ ಕಾಸ್ಟ್ EMI ಮತ್ತು ಆಕರ್ಷಕ ಕಾರ್ಡ್ ಆಫರ್ಗಳು ಸೇರಿವೆ. ಈ ಆಫರ್ಗಳು ಒಂದು ಸೀಮಿತ ಅವಧಿಗೆ ಮಾತ್ರ ಲಭ್ಯವಿವೆ, ಆದ್ದರಿಂದ ಗ್ರಾಹಕರು ಈ ಅವಕಾಶವನ್ನು ತ್ವರಿತವಾಗಿ ಪಡೆಯಬಹುದು.
ಬಜಾಜ್ ಆಟೋದ ಮೋಟಾರ್ಸೈಕಲ್ ವ್ಯವಹಾರದ ಅಧ್ಯಕ್ಷ ಸಾರಂಗ್ ಕಾನಡೆ ಅವರು, “ಫ್ಲಿಪ್ಕಾರ್ಟ್ನೊಂದಿಗಿನ ನಮ್ಮ ಸಹಯೋಗವು ಗ್ರಾಹಕರು ಬಜಾಜ್ ಮೋಟಾರ್ಸೈಕಲ್ಗಳನ್ನು ಖರೀದಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಇದು ಬಜಾಜ್ ಆಟೋದ ಹೊಸತನ ಮತ್ತು ಗ್ರಾಹಕರ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ವ್ಯಾಪಕ ಶ್ರೇಣಿಯ ಮೋಟಾರ್ಸೈಕಲ್ಗಳನ್ನು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಾಗಿಸುವ ಮೂಲಕ, ನಾವು ನಮ್ಮ ತಲುಪುವಿಕೆಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ತಮ್ಮ ಮನೆಗಳಿಂದಲೇ ತಮ್ಮ ಆದ್ಯತೆಯ ಬೈಕ್ಗಳನ್ನು ಕಾಯ್ದಿರಿಸಲು ಅನುಕೂಲಕರ ಮತ್ತು ವೇಗದ ಖರೀದಿ ಅನುಭವವನ್ನು ಒದಗಿಸುತ್ತಿದ್ದೇವೆ” ಎಂದರು.
ಫ್ಲಿಪ್ಕಾರ್ಟ್ನ ಎಲೆಕ್ಟ್ರಾನಿಕ್ಸ್ ವಿಭಾಗದ ಉಪಾಧ್ಯಕ್ಷ ಜಗಜೀತ್ ಹರೋಡೆ ಅವರು ಮಾತನಾಡಿ, “ಬಜಾಜ್ ಆಟೋ ಜೊತೆಗೆ ಸಹಯೋಗ ಮಾಡಿ ಅವರ ವ್ಯಾಪಕ ಶ್ರೇಣಿಯ ಮೋಟಾರ್ಸೈಕಲ್ಗಳನ್ನು ನಮ್ಮ ಇ-ಕಾಮರ್ಸ್ ವೇದಿಕೆಗೆ ತರಲು ನಾವು ಸಂತೋಷಪಡುತ್ತೇವೆ. ಫ್ಲಿಪ್ಕಾರ್ಟ್ನಲ್ಲಿ ಬಜಾಜ್ ಮೋಟಾರ್ಸೈಕಲ್ಗಳನ್ನು ನೀಡುವ ಮೂಲಕ, ನಾವು ನಮ್ಮ ಆಟೋಮೊಬೈಲ್ ವರ್ಗವನ್ನು ವಿಸ್ತರಿಸುತ್ತಿದ್ದೇವೆ ಮತ್ತು ಭಾರತದಾದ್ಯಂತದ ಗ್ರಾಹಕರಿಗೆ ತಮ್ಮ ಮನೆಗಳಿಂದಲೇ ಅನುಕೂಲಕರವಾಗಿ ತಮ್ಮ ಆದ್ಯತೆಯ ಬೈಕ್ಗಳನ್ನು ಕಾಯ್ದಿರಿಸಲು ಸುಲಭವಾಗಿಸುತ್ತಿದ್ದೇವೆ” ಎಂದರು.
ಇದನ್ನೂ ಓದಿ: ಬಹುನಿರೀಕ್ಷಿತ ಬಜಾಜ್ ಪಲ್ಸರ್ N160 ಬೈಕ್ ರೂ 1.40 ಲಕ್ಷಕ್ಕೆ ಬಿಡುಗಡೆ