Nissan Magnite: ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಅಕ್ಟೋಬರ್ 4ಕ್ಕೆ ಲಾಂಚ್, ಬುಕ್ಕಿಂಗ್ ಶುರುವಾಗಿದೆ!

Nissan Magnite Facelift ಎಸ್ಯುವಿ ಅಕ್ಟೋಬರ್ 4ರಿಂದ ಖರೀದಿಗೆ ಲಭ್ಯ, ಅಕ್ಟೋಬರ್ 5ರಿಂದಲೇ ವಿತರಣೆ

ನಿಸ್ಸಾನ್ ಮೋಟಾರ್ಸ್ ಇಂಡಿಯಾ (Nissan Motor India) ತನ್ನ ಗ್ರಾಹಕರಿಗೆ ಒಂದು ಸಂತೋಷದ ಸುದ್ದಿಯನ್ನು ನೀಡಿದೆ. ಕಂಪನಿಯ ಪ್ರಸಿದ್ಧ ಮ್ಯಾಗ್ನೈಟ್ (Nissan Magnite) ಎಸ್‌ಯುವಿಯ ಹೊಸ ಆವೃತ್ತಿಯನ್ನು ಅಕ್ಟೋಬರ್ 4, 2024 ರಂದು ಬಿಡುಗಡೆ ಮಾಡಲಾಗುತ್ತಿದೆ. ಈ ಹೊಸ ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಸೇರಿಸಲಾಗಿದೆ. ಈ ಹೊಸ ಕಾರನ್ನು ನಿಮ್ಮ ಹತ್ತಿರದ ನಿಸ್ಸಾನ್ ಡೀಲರ್‌ಶಿಪ್‌ಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಬಹುದು. ಈ ವಾಹನಗಳನ್ನು ಅಕ್ಟೋಬರ್ 5 ರಿಂದ ಗ್ರಾಹಕರಿಗೆ ಹಸ್ತಾಂತರಿಸಲಾಗುವುದು.

ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಚಿತ್ರಗಳು, ಈ ಕಾರಿನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತವೆ. ಹೊಸ ಮ್ಯಾಗ್ನೈಟ್‌ನಲ್ಲಿ ಆಕರ್ಷಕವಾದ ಅಲಾಯ್ ವೀಲ್‌ಗಳು, ಆಧುನಿಕ ವಿನ್ಯಾಸದ ಗ್ರಿಲ್ ಮತ್ತು ಹೊಸ ರೀತಿಯ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಕಾರಿಗೆ ಹೊಸ ಉತ್ಸಾಹವನ್ನು ನೀಡಿ, ಯುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ನಿಸ್ಸಾನ್ ಎಕ್ಸ್-ಟ್ರೈಲ್ ರೂ. 49.92 ಲಕ್ಷಕ್ಕೆ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್: ಇಂಟೀರಿಯರ್

ನಿಸ್ಸಾನ್ ಮ್ಯಾಗ್ನೈಟ್‌ನ (Nissan Magnite) ಕ್ಯಾಂಬಿನ್‌ಗೆ ನವೀಕರಣ ಸಿಗಲಿದ್ದು, ಪ್ರಯಾಣವನ್ನು ಮತ್ತಷ್ಟು ಆರಾಮದಾಯಕ ಮತ್ತು ಸುಲಭವಾಗಿಸುವ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ನವೀಕರಿಸಿದ ಮಾದರಿಯಲ್ಲಿ ಸಿಂಗಲ್-ಪೇನ್ ಎಲೆಕ್ಟ್ರಿಕ್ ಸನ್‌ರೂಫ್, 9 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್‌ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ), ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ,7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಬಹು ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು. ಇದಲ್ಲದೇ, ಡ್ಯಾಶ್‌ಬೋರ್ಡ್‌ ಗೆ ಹೊಸ ವಿನ್ಯಾಸದ ವಸ್ತುಗಳು ಮತ್ತು ಸೀಟುಗಳಿಗೆ ಹೊಸ ಕವರ್‌ಗಳು ಗ್ಲಾಮರ್‌ ಹೆಚ್ಚಿಸಲಿದೆ.

Nissan Magnite Facelift
Nissan Magnite Facelift

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿಯು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿನ ಆದ್ಯತೆಯಾಗಿ ಪರಿಗಣಿಸಿದೆ. ಈ ವಾಹನವು 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವಾರು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್: ಎಕ್ಸ್ಟೀರಿಯರ್

Nissan Magnite Facelift ಆವೃತ್ತಿಯು ತನ್ನ ಹಿಂದಿನ ಆಕರ್ಷಣೆಯನ್ನು ಉಳಿಸಿಕೊಂಡು, ಹೊಸ ನೋಟದೊಂದಿಗೆ ವಾಹನ ಪ್ರಿಯರನ್ನು ಆಕರ್ಷಿಸಲಿದೆ. ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು. ನವೀಕರಿಸಿದ ರೇಡಿಯೇಟರ್ ಗ್ರಿಲ್, ಎಲ್ಇಡಿ ಹೆಡ್ಲ್ಯಾಂಪ್‌ಗಳು ಮತ್ತು ಬಂಪರ್‌ಗಳು ವಾಹನಕ್ಕೆ ಹೊಸ ಆಯಾಮವನ್ನು ನೀಡುತ್ತವೆ. ವಿಶೇಷವಾಗಿ, ಹೊಸ ಎಲ್ಇಡಿ ಜೊತೆಗೆ ಡೇ ಟೈಮ್ ರನ್ನಿಂಗ್ ಲೈಟ್ಸ್ ಗಳು ಇನ್ನಷ್ಟು ಆಕರ್ಷಕವಾಗಿಸುತ್ತದೆ.

ಈ ಎಸ್ಯುವಿಯ ಸೈಡ್ ಲುಕ್ ಅಷ್ಟೇನೂ ಬದಲಾಗುವುದಿಲ್ಲ. ಆದರೆ, ಉನ್ನತ ಶ್ರೇಣಿಯ ಮಾದರಿಗಳಲ್ಲಿ ಹೊಸ ವಿನ್ಯಾಸದ ಡುಯಲ್ ಟೋನ್  ಅಲಾಯ್ ವೀಲ್ ಗಳು. ಕಡಿಮೆ ಬೆಲೆಬಾಳುವ ಮಾದರಿಗಳಲ್ಲಿ ಹೊಸ ಪ್ಲಾಸ್ಟಿಕ್ ವೀಲ್ ಕವರ್‌ಗಳು ಕೂಡ ಸೇರಲಿವೆ. ಇದಲ್ಲದೆ, ಹೊಸ ಸ್ಕಿಡ್ ಪ್ಲೇಟ್‌ ಕೂಡ ಸೇರ್ಪಡೆಗೊಂಡಿದೆ. ಹಿಂಭಾಗದಲ್ಲಿ, ಸುಧಾರಿತ ಬಂಪರ್ ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್ ಲೈಟ್‌ಗಳನ್ನು ನಿರೀಕ್ಷಿಸಬಹುದು.

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್: ಪವರ್‌ಟ್ರೇನ್

ಹೊಸ ಮ್ಯಾಗ್ನೈಟ್ ಮಾದರಿಯಲ್ಲಿ ಎಂಜಿನ್‌ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಗ್ರಾಹಕರು ಈಗಿನ ಮಾದರಿಯಂತೆಯೇ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು. ಇದರಲ್ಲಿ 1.0 ಲೀಟರ್, ಮೂರು ಸಿಲಿಂಡರ್ ಎಂಜಿನ್ ಆಯ್ಕೆ ಲಭ್ಯವಿರುತ್ತದೆ. ಈ ಎಂಜಿನ್ 71 bhp ಶಕ್ತಿ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುವವರಿಗಾಗಿ, 98 bhp ಶಕ್ತಿ ಮತ್ತು 160 Nm ಟಾರ್ಕ್ ನೀಡುವ ಟರ್ಬೋಚಾರ್ಜ್ಡ್ ಆವೃತ್ತಿಯೂ ಲಭ್ಯವಿರುತ್ತದೆ. ಗೇರ್‌ಬಾಕ್ಸ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು ಸಿವಿಟಿ ಆಯ್ಕೆಗಳು ಲಭ್ಯವಿರಬಹುದು ಎಂದು ನಿರೀಕ್ಷಿಸಲಾಗಿದೆ.

Leave a Comment