ಹೋಂಡಾ ಎಲಿವೇಟ್ ಅಪೆಕ್ಸ್ ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಳಿಗಿಂತ ರೂ. 15,000 ಹೆಚ್ಚು ಬೆಲೆಯನ್ನು ಹೊಂದಿವೆ
ಪ್ರಸಿದ್ಧ ವಾಹನ ತಯಾರಕ ಕಂಪನಿಯಾದ ಹೋಂಡಾ ಇಂಡಿಯಾ ಇತ್ತೀಚೆಗೆ ತನ್ನ ‘ದಿ ಗ್ರೇಟ್ ಹೋಂಡಾ ಫೆಸ್ಟ್’ ಅಭಿಯಾನದ ಭಾಗವಾಗಿ ಹಬ್ಬದ ಸಮಯದಲ್ಲಿ ಎಲಿವೇಟ್ ಮಧ್ಯಮ ಗಾತ್ರದ ಎಸ್ಯುವಿಯ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೋಂಡಾ ಎಲಿವೇಟ್ ಅಪೆಕ್ಸ್ ಎಡಿಷನ್ (Honda Elevate Apex Edition) ಎಂದು ಹೆಸರಿಸಲಾದ ಈ ಸೀಮಿತ ಆವೃತ್ತಿಯು ಸಾಮಾನ್ಯ ಮಾದರಿಗಿಂತ ವಿಶೇಷವಾಗಿದೆ. ಈ ವಿಶೇಷ ಆವೃತ್ತಿಯನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಉತ್ಪಾದಿಸಲಾಗಿದ್ದು, ಹಬ್ಬದ ಸಮಯದಲ್ಲಿ ದೇಶಾದ್ಯಂತ ಮಾರಾಟಕ್ಕೆ ಲಭ್ಯವಿದೆ.
ಹೊಸ ಹೋಂಡಾ ಎಲಿವೇಟ್ ಅಪೆಕ್ಸ್ ಎಡಿಷನ್ ಮಾದರಿಯು ಗ್ರಾಹಕರ ವಿವಿಧ ಆದ್ಯತೆಗಳನ್ನು ಪೂರೈಸುವಂತೆ V MT, V CVT, VX MT ಮತ್ತು VX CVT ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ವಾಹನದ ಹೊರಗೆ ಮತ್ತು ಒಳ ಭಾಗಗಳಿಗೆ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ಗ್ರಾಹಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಈ ಆವೃತ್ತಿಯ ಬೆಲೆ ರೂ 12.86 ಲಕ್ಷದಿಂದ ರೂ 15.25 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಇದ್ದು, ಇದು ಸಾಮಾನ್ಯ ಮಾದರಿಗಳಿಗಿಂತ ಸುಮಾರು ರೂ 15,000 ಹೆಚ್ಚಾಗಿದೆ.
ಹೊಂಡಾ ಎಲಿವೇಟ್ ಅಪೆಕ್ಸ್: ಫೀಚರ್ಸ್ ಗಳು
ಹೊಂಡಾ ಎಲಿವೇಟ್ ಅಪೆಕ್ಸ್ (Honda Elevate Apex) ಆವೃತ್ತಿಯು ಈಗ ಹೊಸ ಮತ್ತು ಆಕರ್ಷಕವಾದ ಇಂಟೀರಿಯರ್ ಅನ್ನು ಹೊಂದಿದೆ. ಹಿಂದಿನ ಟ್ಯಾನ್ ಮತ್ತು ಕಪ್ಪು ಬಣ್ಣದ ಇಂಟೀರಿಯರ್ ಬದಲು, ಈಗ ಹೊಸ ಡ್ಯುಯಲ್-ಟೋನ್ ಐವರಿ ಮತ್ತು ಕಪ್ಪು ಬಣ್ಣದ ಒಳಾಂಗಣವು ಕಣ್ಣು ಹಾಯಿಸುವಂತಿದೆ. ಇದಲ್ಲದೆ, ಕಾರಿನ ಒಳಾಂಗಣವನ್ನು ಇನ್ನಷ್ಟು ಆಕರ್ಷಕವಾಗಿಸಲು ಏಳು ಬಣ್ಣಗಳಲ್ಲಿ ರಿದಮಿಕ್ ಆಂಬಿಯೆಂಟ್ ಲೈಟಿಂಗ್ ಸೇರಿಸಲಾಗಿದೆ, ಹೊಸ ಲೆಥೆರೆಟ್ ಟ್ರಿಮ್ಗಳನ್ನು ಡ್ಯಾಶ್ಬೋರ್ಡ್ ಮತ್ತು ಡೋರ್ ಪ್ಯಾನೆಲ್ಗಳಿಗೆ ಸೇರಿಸಲಾಗಿದ್ದು, ಇದು ಕಾರಿಗೆ ಹೆಚ್ಚು ಪ್ರೀಮಿಯಂ ನೋಟವನ್ನು ನೀಡುತ್ತದೆ. ಈ ಹಿಂದೆ ಇದು ಕೇವಲ ಟಾಪ್-ಆಫ್-ದಿ-ಲೈನ್ ZX ಮಾದರಿಗೆ ಮಾತ್ರ ಸೀಮಿತವಾಗಿತ್ತು. ಅಷ್ಟೇ ಅಲ್ಲ, ಅಪೆಕ್ಸ್ ಆವೃತ್ತಿಯು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೀಟ್ ಕವರ್ಗಳು ಮತ್ತು ಕುಶನ್ ಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಹೊಂಡಾ ಎಲಿವೇಟ್ ನಿಮ್ಮದಾಗಿಸಿಕೊಳ್ಳಿ! ಈ ಆಗಸ್ಟ್ನಲ್ಲಿ ₹65,000 ವರೆಗೆ ಡಿಸ್ಕೌಂಟ್

ಹೊಂಡಾ ಎಲಿವೇಟ್ ಎಸ್ಯುವಿಯ ಆಂತರಿಕ ವಿನ್ಯಾಸವು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ತಂತ್ರಜ್ಞಾನದಿಂದ ಸಮೃದ್ಧವಾಗಿದೆ. ಡ್ಯುಯಲ್-ಡಿಸ್ಪ್ಲೇ ಡ್ಯಾಶ್ಬೋರ್ಡ್ನೊಂದಿಗೆ, 10.25 ಇಂಚಿನ ಎಚ್ಡಿ ಇನ್ಫೋಟೈನ್ಮೆಂಟ್ ಸಿಸ್ಟಮ್ ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿಯೊಂದಿಗೆ ಸಂಪರ್ಕ ಹೊಂದಿದೆ. 8-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ನೊಂದಿಗೆ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆಹ್ಲಾದಕರವಾಗಿಸುತ್ತದೆ. ಅಷ್ಟೇ ಅಲ್ಲದೆ, 7 ಇಂಚಿನ ಡಿಜಿಟಲ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್ರೂಫ್, ಮೃದುವಾದ ಸೀಟಿಂಗ್ ಮತ್ತು ವೈರ್ಲೆಸ್ ಫೋನ್ ಚಾರ್ಜರ್ನಂತಹ ವೈಶಿಷ್ಟ್ಯಗಳು ಈ ಎಸ್ಯುವಿಯನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ.
ಈ ವಿಶೇಷ ಆವೃತ್ತಿಯ ವಾಹನದ ಮುಂಭಾಗದಲ್ಲಿ ಪಿಯಾನೋ ಬ್ಲ್ಯಾಕ್ ಬಣ್ಣದ ಸ್ಪಾಯ್ಲರ್ ಅನ್ನು ಅಳವಡಿಸಲಾಗಿದ್ದು, ಅದರ ಅಡಿಯಲ್ಲಿ ಕ್ರೋಮ್ ಅಲಂಕಾರಗಳನ್ನು ಸೇರಿಸಲಾಗಿದೆ. ವಾಹನದ ಬದಿಗಳಲ್ಲಿನ ಸ್ಕರ್ಟ್ಗಳು ಮತ್ತು ಹಿಂಭಾಗದ ಕೆಳಭಾಗವು ಸಹ ಪಿಯಾನೋ ಬ್ಲ್ಯಾಕ್ ಬಣ್ಣದ ಮೃದುವಾದ ಮುಕ್ತಾಯವನ್ನು ಹೊಂದಿದೆ. ಇದಲ್ಲದೆ, ಫೆಂಡರ್ಗಳು ಮತ್ತು ಟೈಲ್ಗೇಟ್ಗಳಲ್ಲಿ ವಿಶೇಷವಾದ ಅಪೆಕ್ಸ್ ಎಡಿಷನ್’ ಬ್ಯಾಡ್ಜ್ಗಳನ್ನು ಅಳವಡಿಸಲಾಗಿದೆ. ಗ್ರಾಹಕರು ಈ ಆವೃತ್ತಿಯನ್ನು ಸ್ಟ್ಯಾಂಡರ್ಡ್ ಎಲಿವೇಟ್ ಮಾದರಿಯಲ್ಲಿ ಲಭ್ಯವಿರುವ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂದು ತಯಾರಕರು ತಿಳಿಸಿದ್ದಾರೆ.
ಹೊಂಡಾ ಎಲಿವೇಟ್ ಅಪೆಕ್ಸ್ (Honda Elevate Apex): ಪವರ್ಟ್ರೇನ್, ಮೈಲೇಜ್
ಹೊಸ ಹೋಂಡಾ ಎಲಿವೇಟ್ ಮಾದರಿಯು ಪ್ರಸ್ತುತ ಪೆಟ್ರೋಲ್ ಇಂಜಿನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. ಈ ಕಾರಿನಲ್ಲಿ ಹೋಂಡಾ ಸಿಟಿಯಲ್ಲಿ ಬಳಸಲಾಗುವ 1.5-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 119 ಬಿಹೆಚ್ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗ್ರಾಹಕರು ತಮ್ಮ ಆದ್ಯತೆಯಂತೆ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯು ಲೀಟರ್ಗೆ 15.31 ಕಿಲೋಮೀಟರ್ಗಳಷ್ಟು ಮೈಲೇಜ್ ನೀಡುತ್ತದೆ, ಆದರೆ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯು ಲೀಟರ್ಗೆ 16.92 ಕಿಲೋಮೀಟರ್ಗಳಷ್ಟು ಮೈಲೇಜ್ ಅನ್ನು ನೀಡುತ್ತದೆ.