ಸಣ್ಣ ಕಾರುಗಳ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ Maruti Suzuki ತನ್ನ Alto K10 ಮತ್ತು S-Presso ಮಾದರಿಗಳ ಬೆಲೆಯನ್ನು ಕಡಿತಗೊಳಿಸಿದೆ.
ದೇಶದಲ್ಲಿ ಕಾರುಗಳ ಬೇಡಿಕೆ ಕುಸಿತದಿಂದಾಗಿ ಮಾರುತಿ ಸುಜುಕಿ(Maruti Suzuki) ಕಂಪನಿ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ತಂತ್ರ ಅನುಸರಿಸಿದೆ. ಕಂಪನಿಯು ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೋ ಕಾರುಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಈ ಬೆಲೆ ಕಡಿತವು ಸೋಮವಾರದಿಂದಲೇ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಮಾರುತಿ ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, S-Presso LXI ಪೆಟ್ರೋಲ್ ಮಾದರಿಯ ಬೆಲೆ 2000 ರೂಪಾಯಿ ಮತ್ತು Alto K10 VXI ಪೆಟ್ರೋಲ್ ಮಾದರಿಯ ಬೆಲೆ 6500 ರೂಪಾಯಿ ಕಡಿಮೆಯಾಗಿದೆ.
ಆಲ್ಟೋ ಕೆ-10ನ ಎಕ್ಸ್-ಶೋರೂಂ ಬೆಲೆ 3.99 ಲಕ್ಷ ರೂಪಾಯಿಗೆ ಇಳಿದಿದ್ದು, ಎಸ್-ಪ್ರೆಸ್ಸೋ ಕಾರು 4,26 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇತ್ತೀಚೆಗೆ ತನ್ನ ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಆಗಸ್ಟ್ 2023ಕ್ಕೆ ಹೋಲಿಸಿದರೆ ಕಾರುಗಳ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದರೂ, ಕಂಪನಿಯು 1.82 ಲಕ್ಷ ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಮಾಸಿಕ ಆಧಾರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ.
ಇದನ್ನೂ ಓದಿ: ಮಾರುತಿ ಕಾರು ಪ್ರಿಯರಿಗೆ ಸಿಹಿಸುದ್ದಿ: ಸೇಫ್ಟಿ ಫೀಚರ್ ಗಳಲ್ಲಿ ಮಹತ್ವದ ಅಪ್ಡೇಟ್!

ಮಾರುತಿ ಸುಜುಕಿಯ ಒಟ್ಟು ಮಾರಾಟವು ಆಗಸ್ಟ್ ತಿಂಗಳಲ್ಲಿ 8% ಅಷ್ಟು ಕುಸಿದಿದೆ. ಬ್ರೆಝ್ಜಾ, ಫ್ರಾಂಕ್ಸ್, ಎರ್ಟಿಗಾ ಮತ್ತು ಇತರ ಮಾದರಿಗಳಂತಹ ಉಪಯುಕ್ತ ವಾಹನಗಳ ಮಾರಾಟವು ನಿರಂತರವಾಗಿ ಏರಿಕೆ ಕಾಣುತ್ತಿದ್ದರೂ, ಸಣ್ಣ ಕಾರು ವಿಭಾಗದಲ್ಲಿ ಬೇಡಿಕೆ ಕುಸಿತ ಕಂಡಿದೆ. ಇದರಿಂದಾಗಿ ಆಗಸ್ಟ್ನಲ್ಲಿ ಕಾರು ತಯಾರಕರ ಒಟ್ಟಾರೆ ಮಾರಾಟದ ಮೇಲೆ ಪರಿಣಾಮ ಬೀರಿದೆ. ಆಲ್ಟೋ ಕೆ10 ಮತ್ತು ಎಸ್-ಪ್ರೆಸೊ ಸೇರಿದಂತೆ ಈ ವಿಭಾಗದ ಮಾದರಿಗಳ ಮಾರಾಟವು ಆಗಸ್ಟ್ ಕಳೆದ ವರ್ಷಕ್ಕೆ ಹೋಲಿಸಿದರೆ 10,648 ಘಟಕಗಳಿಗೆ ಕುಸಿದಿದೆ, ಇದು 18 %ಪ್ರತಿಶತಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಈ ಇಳಿಕೆಯು ಕಂಪನಿಯ ಒಟ್ಟಾರೆ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ಮಾರುತಿ ಸುಜುಕಿಯು 2023 ರ ಆರಂಭದಿಂದ ತನ್ನ ಸಣ್ಣ ಕಾರುಗಳ ಮಾರಾಟದಲ್ಲಿ ಇಳಿಕೆಯನ್ನು ಎದುರಿಸುತ್ತಿದೆ. ಕಂಪನಿಯ ಇತ್ತೀಚಿನ ಮಾರಾಟದ ದತ್ತಾಂಶವು ಏಪ್ರಿಲ್-ಆಗಸ್ಟ್ 2024ರ ಅವಧಿಯಲ್ಲಿ ಮಿನಿ ಮತ್ತು ಕಾಂಪ್ಯಾಕ್ಟ್ ಕಾರುಗಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 13% ಕ್ಕಿಂತ ಹೆಚ್ಚು ಕುಸಿದಿದೆ ಎಂದು ತೋರಿಸುತ್ತದೆ. ಆದರೆ ಆಶ್ಚರ್ಯಕರವಾಗಿ, ಯುಟಿಲಿಟಿ ವಾಹನಗಳ ವಿಭಾಗವು 14% ಹೆಚ್ಚಳವನ್ನು ಕಂಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ಬೆಲೆ ರೂ 7.29 ಲಕ್ಷದಿಂದ ಪ್ರಾರಂಭ
ಮಾರುತಿ ಸುಜುಕಿಯ 43ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಆರ್ಸಿ ಭಾರ್ಗವ ಅವರು, ಕಂಪನಿಯು ಸಣ್ಣ ಕಾರುಗಳ ಉತ್ಪಾದನೆಯಲ್ಲಿ ಮುಂದುವರಿಯುವ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು. 2025-26ರ ವೇಳೆಗೆ ಈ ವಿಭಾಗವು ಮತ್ತೆ ಉತ್ತಮ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದರು. “ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ, ಕಡಿಮೆ ಬೆಲೆಯ ಸಣ್ಣ ಕಾರುಗಳ ಬೇಡಿಕೆ ಇನ್ನೂ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ತಾತ್ಕಾಲಿಕವಾಗಿ ಬೇಡಿಕೆ ಕಡಿಮೆಯಾಗಿರುವುದು ನಮ್ಮ ಈ ಯೋಜನೆಯನ್ನು ಬದಲಾಯಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.