Scrappage Policy: ಗುಜರಿ ಪಾಲಿಸಿ ಅಡಿ ಕೇಂದ್ರ ಸರ್ಕಾರದಿಂದ ಹೊಸ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹಳೆಯ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನಗಳ ಮೇಲೆ 1.5% ರಿಂದ 3.5% ರವರೆಗೆ ರಿಯಾಯಿತಿ ಪಡೆಯಿರಿ

ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಇತ್ತೀಚೆಗೆ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಗುಜರಿ ಪಾಲಿಸಿ ಅಡಿ (Scrappage Policy) ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ, ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಮೇಲೆ 1.5% ರಿಂದ 3.5% ರವರೆಗೆ ರಿಯಾಯಿತಿ ನೀಡಲು ಒಪ್ಪಿಕೊಂಡಿವೆ. ಈ ರಿಯಾಯಿತಿಯು ಮುಂಬರುವ ಹಬ್ಬದ ಸಮಯದಲ್ಲಿ ವಾಹನ ಮಾರಾಟವನ್ನು ಹೆಚ್ಚಿಸುವುದರ ಜೊತೆಗೆ, ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿಗೆ ಹೆಚ್ಚಿನ ಬಲ ತುಂಬಲಿದೆ.

ಸಾರಿಗೆ ಸಚಿವರು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ದೇಶದ ಆಟೋಮೊಬೈಲ್ ಉದ್ಯಮದ ಸದೃಢತೆಗಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿಸ್ತಾರವಾದ ಚರ್ಚೆ ನಡೆಸಿದರು. ಈ ಸಭೆಯಲ್ಲಿ, ಹಲವು ಪ್ರಮುಖ ವಾಹನ ತಯಾರಕ ಕಂಪನಿಗಳು ಹಳೆಯ ವಾಹನಗಳನ್ನು ಬದಲಾಯಿಸುವ ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಗುಜರಿಗೆ ಹಾಕಿದ ವಾಹನಗಳ ದಾಖಲೆ ಪತ್ರ (Scrappage Certificate) ತೋರಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡುವ ಘೋಷಣೆ ಮಾಡಿವೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.

ಗುಜುರಿ ಪಾಲಿಸಿ (Scrappage Policy)

ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ವಾಣಿಜ್ಯ ವಾಹನ ತಯಾರಕರು ಎರಡು ವರ್ಷಗಳ ಕಾಲ ಮತ್ತು ಪ್ರಯಾಣಿಕ ವಾಹನ ತಯಾರಕರು ಒಂದು ವರ್ಷದ ಕಾಲ ವಾಹನಗಳ ಮೇಲೆ ಗಣನೀಯ ರಿಯಾಯಿತಿ ನೀಡಲು ಸಿದ್ಧರಾಗಿದ್ದಾರೆ. ಇದರೊಂದಿಗೆ, ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ಸ್, ವೋಲ್ವೋ ಐಷರ್ ಕಮರ್ಷಿಯಲ್ ವೆಹಿಕಲ್ಸ್, ಫೋರ್ಸ್ ಮೋಟಾರ್ಸ್ ಮತ್ತು ಮಹೀಂದ್ರಾ ಮುಂತಾದ ಪ್ರಮುಖ ವಾಣಿಜ್ಯ ವಾಹನ ತಯಾರಕರು ಕಾರ್ಗೋ ವಾಹನಗಳ ಮೇಲೆ ಶೇಕಡಾ ಮೂರುರಷ್ಟು ಎಕ್ಸ್ ಶೋರೂಂ ರಿಯಾಯಿತಿ ಘೋಷಿಸಿದ್ದು, ಇದು ಸಾಮಾನ್ಯ ಜನರಿಗೆ ಬಹುದೊಡ್ಡ ನೆರವಾಗಲಿದೆ.

Tata Motors

ಹೊಸ ಗುಜರಿ ಪಾಲಿಸಿ (Scrappage Policy) ರಿಯಾಯ್ತಿ ಯೋಜನೆಯಡಿ ಪ್ರಯೋಜನ ಪಡೆಯುವ ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ನೋಂದಾಯಿತ ಗುಜರಿ ಕೇಂದ್ರಗಳಲ್ಲಿ ಸ್ಕ್ರಾಪ್ ಮಾಡಿಸುವ ಮೂಲಕ ಪ್ರಮಾಣ ಪತ್ರ (Scrappage Certificate) ಪಡೆದುಕೊಳ್ಳಬೇಕಿದ್ದು, ಆ ಪ್ರಮಾಣ ಪತ್ರವನ್ನು ಕಾರು ಡೀಲರ್ಸ್ ಸಲ್ಲಿಸುವ ಮೂಲಕ ನಿಮ್ಮ ಇಷ್ಟದ ವಾಹನಗಳ ಖರೀದಿ ಮೇಲೆ ನಿಗದಿತ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ನೋಂದಾಯಿತ ಗುಜರಿ ಕೇಂದ್ರಗಳಲ್ಲಿ 1.2 ಲಕ್ಷ ವಾಹನಗಳು ಈಗಾಗಲೇ ಗುಜರಿಯಾಗಿವೆ. ಇದರಲ್ಲಿ 15 ವರ್ಷಕ್ಕಿಂತ ಹಳೆಯದಾದ 61,000 ಸರ್ಕಾರಿ ವಾಹನಗಳು ಸೇರಿವೆ. ಸರ್ಕಾರವು 2025ರ ಮಾರ್ಚ್‌ ಒಳಗೆ ಇನ್ನೂ 90,000 ಹಳೆಯ ಸರ್ಕಾರಿ ವಾಹನಗಳನ್ನು ಗುಜರಿ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಮೂಲಕ ಹಳೆಯ ವಾಹನಗಳಿಂದ ಉತ್ಪತ್ತಿಯಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಗುಜರಿಯಲ್ಲಿರುವ ಹಳೆಯ ವಾಹನಗಳ ಬಿಡಿಭಾಗಗಳನ್ನು ಮರುಬಳಕೆ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ.

2022ರಲ್ಲಿ, ಕೇಂದ್ರ ಸರ್ಕಾರವು ಹಳೆಯ ವಾಹನಗಳನ್ನು ಬದಲಾಯಿಸಿ ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ, ಆಟೋಮೊಬೈಲ್ ಕಂಪನಿಗಳಿಗೆ ಶೇಕಡ 5ರಷ್ಟು ರಿಯಾಯಿತಿ ನೀಡುವಂತೆ ಸಲಹೆ ನೀಡಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಯಾವ ವಾಹನ ತಯಾರಕ ಕಂಪನಿಯೂ ಈ ಪ್ರಸ್ತಾಪವನ್ನು ಸ್ವೀಕರಿಸಲು ಮುಂದಾಗಲಿಲ್ಲ.

Leave a Comment