Tata Curvv EV: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ಸರಣಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಟಾಟಾ ಕರ್ವ್ ಇವಿ(Tata Curvv EV) ಕೂಪೆ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ಆರಂಭಿಕ ಬೆಲೆ  ರೂ. 17.49 ಲಕ್ಷದಿಂದ ರೂ. 21.99 ಲಕ್ಷ (ಎಕ್ಸ್‌ಶೋರೂಂ) ವರೆಗೆ ಇದೆ. ಇನ್ನು, ಈ ವಾಹನದ ಇಂಧನ ಚಾಲಿತ ಆವೃತ್ತಿಯ ಬೆಲೆಯನ್ನು ಈ ವರ್ಷದ ಸೆಪ್ಟೆಂಬರ್ 2 ರಂದು ಪ್ರಕಟಿಸಲಾಗುವುದು. ಟಾಟಾ ಕರ್ವ್ ಇವಿ ಐದು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದ್ದು, ಅದರ ಆಕರ್ಷಕ ಕೂಪೆ ಎಸ್‌ಯುವಿ ವಿನ್ಯಾಸವು ಇತರ ವಾಹನಗಳಿಂದ ಭಿನ್ನವಾಗಿದೆ.

ಟಾಟಾ ಕರ್ವ್ ಇವಿ ಬ್ಯಾಟರಿ, ಪವರ್‌ಟ್ರೇನ್

ಟಾಟಾ ಕರ್ವ್ ಇವಿ(Tata Curvv EV) ಎರಡು ವಿಭಿನ್ನ ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. 45 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದು ಸಲ ಚಾರ್ಜ್ ಮಾಡಿದರೆ 502 ಕಿಲೋಮೀಟರ್‌ವರೆಗೆ ಸಂಚರಿಸಬಹುದು. ಮತ್ತು, 55 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದು ಸಲ ಚಾರ್ಜ್ ಮಾಡಿದರೆ 585 ಕಿಲೋಮೀಟರ್‌ವರೆಗೆ ಸಂಚರಿಸಬಹುದು. ಟಾಟಾ ಕಂಪನಿಯ ಪ್ರಕಾರ ಈ ಎಲೆಕ್ಟ್ರಿಕ್ ವಾಹನವನ್ನು 70 kW ತ್ವರಿತ ಚಾರ್ಜಿಂಗ್ ಮೂಲಕ  ಕೇವಲ 15 ನಿಮಿಷಗಳಲ್ಲಿ 150 ಕಿಮೀ ವರೆಗೆ ಸಂಚರಿಸಬಹುದಾದಷ್ಟು ಚಾರ್ಜ್ ಮಾಡಬಹುದು ಅಥವಾ 40 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

55kWh ಮಾದರಿಗಳು ಮುಂಭಾಗದಲ್ಲಿ 167 ಬಿಹೆಚ್‌ಪಿ ಎಲೆಕ್ಟ್ರಿಕ್ ಮೋಟಾರು ಹೊಂದಿದ್ದು, 45kWh ಮಾದರಿಗಳು 150 ಬಿಹೆಚ್‌ಪಿ ಮೋಟಾರು ಹೊಂದಿವೆ. ಎರಡೂ ಮಾದರಿಗಳು 215 Nm ಟಾರ್ಕ್ ಉತ್ಪಾದಿಸುತ್ತವೆ. ಕರ್ವ್ ಇವಿ 55 ಸುಮಾರು 8.6 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆ ವೇಗವನ್ನು ತಲುಪಬಲ್ಲದು ಮತ್ತು ಗರಿಷ್ಠ 160 ಕಿಮೀ/ಗಂಟೆ ವೇಗವನ್ನು ವೇಗವನ್ನು ಸಾಧಿಸಬಲ್ಲದು. ಆದರೆ, ಕರ್ವ್ ಇವಿ 45 ಮಾದರಿಯು 0 ರಿಂದ 100 ಕಿಮೀ/ಗಂಟೆ ವೇಗವನ್ನು ತಲುಪಲು ಸುಮಾರು 9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

Tata Curvv EV

ಕರ್ವ್ ಇವಿ V2V (ವೆಹಿಕಲ್ ಟು ವೆಹಿಕಲ್) ಮತ್ತು V2L (ವೆಹಿಕಲ್ ಟು ಲೋಡ್) ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಕಾರಿನ ಚಾಲನಾ ಅನುಭವವನ್ನು ಇನ್ನಷ್ಟು ಸುಧಾರಿಸಲು, ಈ ಮಾದರಿಯ ಕೇಂದ್ರ ಬಿಂದುವನ್ನು (ಸೆಂಟರ್ ಆಫ್ ಗ್ರಾವಿಟಿ) 60 ಮಿಮೀ ಕಡಿಮೆ ಮಾಡಲಾಗಿದೆ. ಟಾಟಾ ಕರ್ವ್ ಇವಿ 190 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 450 ಮಿಮೀ ವಾಟರ್ ವೇಡಿಂಗ್ ಆಳವನ್ನು ಹೊಂದಿದ್ದು, ಎಲ್ಲಾ ರೀತಿಯ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಸಹಾಯ ಮಾಡುತ್ತದೆ

Tata Curvv EV ವೈಶಿಷ್ಟ್ಯಗಳು

ಐಸಿಇ ಮಾದರಿ ಒಳಗಡೆ ಸೊಗಸಾದ ಬರ್ಗಂಡಿ ಬಣ್ಣದಲ್ಲಿ ಎದ್ದು ಕಾಣುತ್ತದೆ, ಆದರೆ ಇವಿ ಮಾದರಿಯು ಆಧುನಿಕ ಮತ್ತು ಪ್ರಭಾವಶಾಲಿ ಬೂದು ಮತ್ತು ಬಿಳಿ ಬಣ್ಣಗಳ ಸಮ್ಮಿಶ್ರಣವನ್ನು ಹೊಂದಿದೆ ಜೊತೆಗೆ ಡ್ಯಾಶ್‌ಬೋರ್ಡ್ ಸರಳ ಮತ್ತು ಸ್ಟೈಲಿಶ್ ಆಗಿದೆ. 12.3 ಇಂಚಿನ ವಿಶಾಲವಾದ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆಯು ಗಮನ ಸೆಳೆಯುತ್ತದೆ. ಈ ಟಚ್‌ಸ್ಕ್ರೀನ್ ಕೆಳಗೆ ಟಚ್ ಬೇಸ್ಡ್ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಪನರೊಮಿಕ್ ಸನ್‌ರೂಫ್, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ವಿಥ್ ನ್ಯಾವಿಗೇಶನ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವಿಶಿಷ್ಟವಾದ ಟ್ರೆಪೆಜಾಯಿಡಲ್ ಎಸಿ ವೆಂಟ್‌ಗಳು ಇವೆ. ಮತ್ತು ಅತ್ಯುತ್ತಮ 320w 9-ಸ್ಪೀಕರ್ JBL ಮ್ಯೂಸಿಕ್ ಸಿಸ್ಟಮ್ ಅನ್ನು ಹೊಂದಿದೆ. ಹಾಗೂ ಲೆವೆಲ್ 2 ಎಡಿಎಎಸ್ ಅನ್ನು ಕೂಡ ಹೊಂದಿದೆ

ಹೊಸ ಟಾಟಾ ಕರ್ವ್(Tata Curvv EV) ಎಲೆಕ್ಟ್ರಿಕ್ ಕೂಪೆ ಎಸ್‍ಯುವಿ ಮಾದರಿಯು ಗ್ರಾಹಕರಿಗೆ ವರ್ಚುವಲ್ ಸನ್‌ರೈಸ್, ಪ್ಯೂರ್ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್ ಮತ್ತು ಎಂಪವರ್ಡ್ ಆಕ್ಸೈಡ್ ಎಂಬ ಐದು ಆಕರ್ಷಕ ಬಣ್ಣಗಳ ಆಯ್ಕೆಯನ್ನು ನೀಡುತ್ತದೆ. ಈ ಕಾರಿನ ಟಾಪ್-ಸ್ಪೆಕ್ ಮಾದರಿಯು ಎಂಪವರ್ಡ್ ಆಕ್ಸೈಡ್ ಬಣ್ಣದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಮತ್ತು 500 ಲೀಟರ್‌ಗಳಷ್ಟು ವಿಶಾಲವಾದ ಡಿಕ್ಕಿಯನ್ನು ಹೊಂದಿದೆ. ಇದರ ಜೊತೆಗೆ, ಪಂಚ್ ಇವಿ ಮಾದರಿಯಂತೆ 11.6 ಲೀಟರ್‌ಗಳಷ್ಟು ಸಣ್ಣ ಮುಂಭಾಗದ ಡಿಕ್ಕಿಯನ್ನೂ ಒಳಗೊಂಡಿದೆ.

ಇದನ್ನೂ ಓದಿ: ಟಾಟಾ ಕಾರುಗಳನ್ನು ಈಗ ಕಡಿಮೆ ಬೆಲೆಗೆ ಖರೀದಿಸಿ: ಪಂಚ್, ನೆಕ್ಸಾನ್, ಸಫಾರಿ ಮೇಲೆ ಆಕರ್ಷಕ ರಿಯಾಯಿತಿಗಳು

Leave a Comment